ಮಣಿಪುರ ಹಿಂಸಾಚಾರದ ವಿರೋಧಿಸಿ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ
ಉಡುಪಿ, ಜು.29: ಮಣಿಪುರ ರಾಜ್ಯದಲ್ಲಿ ಕ್ರೈಸ್ತ ಬಂಧುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಗಲಭೆ, ಜನಾಂಗೀಯ ಹತ್ಯೆ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕ್ಯಾಂಡಲ್ ಲೈಟ್ ಮಾರ್ಚ್ ನಡೆಯಿತು.
ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕದಿಂದ ಪ್ರಾರಂಭವಾದ ಮೆರವಣಿಗೆ ನಗರದ ಬೋರ್ಡ್ ಹೈಸ್ಕೂಲ್ ಎದುರು ಸಮಾಪನಗೊಂಡಿತು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ, ಮಣಿಪುರದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯು ತ್ತಿರುವ ಅತ್ಯಾಚಾರ, ಅಮಾನವೀಯ ಬೆತ್ತಲೆ ಮೆರವಣಿಗೆ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹತ್ಯೆ ಯನ್ನು ತಕ್ಷಣ ತಡೆಯಬೇಕು. ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಬೇಕು ಮತ್ತು ಮಣಿಪುರ ಮುಖ್ಯ ಮಂತ್ರಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮುಳೂರ್ ಮಾತನಾಡಿದರು. ಸಭೆಯಲ್ಲಿ ಎಸ್‌ಡಿಪಿಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಅಶ್ರಫ್ ಭಾವ, ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಉಪಸ್ಥಿತರಿದ್ದರು.