ಸ್ಥಳೀಯ ಸ್ವಂತ ವಾಹನ, ಸಣ್ಣ ವಾಣಿಜ್ಯ ವಾಹನಗಳಿಗೆ ವಿನಾಯಿತಿ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-12-30 15:46 GMT

ಉಡುಪಿ, ಡಿ.30: ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 1552 ಸ್ಥಳೀಯ ವಾಹನಗಳು 53,130ಕ್ಕೂ ಹೆಚ್ಚು ಬಾರಿ ಸಾಸ್ತಾನ ಟೋಲ್‌ಗೇಟ್ ಮೂಲಕ ಸಂಚರಿಸುತ್ತವೆ. ಇವೆಲ್ಲವಕ್ಕೂ ಟೋಲ್ ಸುಂಕ ವಿನಾಯಿತಿ ನೀಡಬೇಕೆಂದು ಸ್ಥಳೀಯ ಜನರ ಬೇಡಿಕೆ ಇದೆ. ಈ ವ್ಯಾಪ್ತಿಯ ಸ್ಥಳೀಯ ಸ್ವಂತ ಖಾಸಗಿ ವಾಹನಗಳಿಗೆ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ವಿನಾಯಿತಿ ಹಿಂದಿನಂತೆ ನೀಡಲಾಗುವುದು. ಆದರೆ ಲಾರಿ, ಬಸ್ಸು, ಟಿಪ್ಪರ್ ಸೇರಿದಂತೆ ಭಾರಿ ವಾಹನಗಳು ರಿಯಾಯಿತಿ ಪಾಸ್ ಪಡೆದು ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಹೆದ್ದಾರಿ-66ರ ಟೋಲ್‌ಗೇಟ್‌ನಲ್ಲಿ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್‌ಗಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸ್ಥಳೀಯ ಜನತೆಯ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ರಿಯಾಯಿತಿಯನ್ನು ಕಲ್ಪಿಸಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ಸೂಚಿಸಿದರು.

ಸಾಸ್ತಾನ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರವು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಸುಂಕ ವಸೂಲಾತಿ ಕೇಂದ್ರದ ಸುತ್ತಮುತ್ತ ವಾಸವಿರುವ ಸ್ಥಳೀಯ ಜನರು ತಮ್ಮ ದೈನಂದಿನ ಪ್ರತಿಯೊಂದು ಕಾರ್ಯಕ್ಕೂ ಟೋಲ್ ಅನ್ನು ದಾಟುವ ಪ್ರಸಂಗ ಬರುತ್ತದೆ. ಅವರು ಪ್ರತಿ ಬಾರಿಯೂ ಶುಲ್ಕ ಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ ಎಂದರು.

ಹೀಗಾಗಿ ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಖಾಸಗಿ ಹಾಗೂ ಸಣ್ಣ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಬೇಕೆಂದು ಅವರು ತಿಳಿಸಿದರು.

ಜ.7ರೊಳಗೆ ಪೂರ್ಣಗೊಳಿಸಿ: ಸಂತಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಅಂಡರ್‌ಪಾಸ್ ರಸ್ತೆ ಕಾಮಗಾರಿ ಯನ್ನು ಜ.7ರ ಒಳಗೆ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಇವುಗಳಿಗೆ ರಸ್ತೆಯಲ್ಲಿನ ಅವೈಜ್ಞಾನಿಕ ಕಾಮಗಾರಿ ಸೇರಿದಂತೆ ವಿವಿಧ ಸಮಸ್ಯೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಅಗತ್ಯ ವಿರುವ ಕಡೆ ಸರ್ವಿಸ್ ರಸ್ತೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ ದುರಸ್ಥಿ, ಜಂಕ್ಷನ್‌ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಕೋಟ ಸೂಚಿಸಿದರು.

ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರರಾದ ಪ್ರತಿಭಾ ಹಾಗೂ ಶ್ರೀಕಾಂತ್, ಗುತ್ತಿಗೆದಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News