ಹೊಸ ವರ್ಷಾಚರಣೆಯಲ್ಲಿ ನಿಯಮ ಪಾಲಿಸಲು ಉಡುಪಿ ಎಸ್ಪಿ ಡಾ.ಕೆ.ಅರುಣ್ ಸೂಚನೆ
ಉಡುಪಿ, ಡಿ.30: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಅಕ್ರಮ ಚಟುವಟಿಕೆ ಹಾಗೂ ರೇವು ಪಾರ್ಟಿಗಳ ಬಗ್ಗೆ ನಿಗಾ ಇಡಲು ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಈ ಸಂಬಂಧ ತಂಡ ಅಪಾರ್ಟ್‌ಮೆಂಟ್ ಹಾಗೂ ಹೋಮ್ ಸ್ಟೇಗಳಿಗೆ ದಾಳಿ ನಡೆಸಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಹಾಗೂ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗುವುದು. ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡುವುದಿಲ್ಲ. ಸಾರ್ವಜವನಿಕರು ಯಾವುದೇ ಮಾಹಿತಿ ಇದ್ದರೆ ತಕ್ಷಣ 112 ಕರೆ ಮಾಡಿ ತಿಳಿಸಬೇಕು. ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರಗಿಸಲಿದ್ದಾರೆ ಎಂದರು.
ಹೊಸವರ್ಷ ಆಚರಣೆಯಲ್ಲಿ ಸಾರ್ವಜನಿಕರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿ ಅಪರಾಧಗಳನ್ನು ತಡೆಗಟ್ಟಲು ಇಲಾಖೆಯೊಂದಿಗೆ ಸಹಕರಿಸ ಬೇಕು ಹೊಸ ವರ್ಷ ಆಚರಣೆ ಮಾಡಲು ಮಧ್ಯರಾತ್ರಿ 12.30ರವರೆಗೆ ಮಾತ್ರ ಎಲ್ಲ ಕಡೆ ಅವಕಾಶ ನೀಡಲಾಗಿದೆ. ಆದರೆ ಧ್ವನಿವರ್ಧಕ ಮತ್ತು ಸೌಂಡ್ ಸಿಸ್ಟಮ್‌ಗಳನ್ನು ರಾತ್ರಿ 10ಗಂಟೆವರೆಗೆ ಮಾತ್ರ ಬಳಸು ವಂತೆ ಕಾರ್ಯಕ್ರಮ ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಬೀಚ್‌ಗಳಲ್ಲಿ ಆಳವಾದ ಪ್ರದೇಶಗಳ ಬಗ್ಗೆ ಎಚ್ಚರ ವಹಿಸಬೇಕು. ಕಳೆದ ವರ್ಷ ಈ ರೀತಿ ಆಚರಣೆ ಮಾಡುವ ಸಂದರ್ಭ ಬಹಳ ಕಡೆ ಅಪಘಾತಗಳು ಸಂಭವಿಸಿವೆ. ಆದುದರಿಂದ ಸಾರ್ವಜನಿಕರು ಬಹಳ ಎಚ್ಚರ ದಿಂದ ವಾಹನ ಚಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯ ವಾಗಿ ಸಂಚರಿಸುವ ಹೆಲ್ಮೆಟ್‌ಗಳನ್ನು ಮತ್ತು ಕಾರುಗಳಲ್ಲಿ ಪ್ರಯಾಣಿಸುವವರು ಸೀಲ್ಟ್‌ಬೆಲ್ಟ್ ಧರಿಸಬೇಕು ಎಂದು ಅವರು ಮನವಿ ಮಾಡಿದರು.
ಹೊಸವರ್ಷ ಆಚರಣೆ ಸಂದರ್ಭ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಹ್ಯಾಪಿ ನ್ಯೂ ಇಯರ್ ಎಂಬುದಾಗಿ ಎಪಿಕೆ ಫೈಲ್‌ನಲ್ಲಿ ಸಂದೇಶಗಳು ಬರುತ್ತಿದ್ದು, ಇದನ್ನು ಕ್ಲಿಕ್ ಮಾಡಿದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದುದರಿಂದ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶವನ್ನು ಪರಿಶೀಲಿಸಿ, ಆಲೋಚನೆ ಮಾಡಿ ಓಪನ್ ಮಾಡಬೇಕು ಎಂದು ಎಸ್ಪಿ ತಿಳಿಸಿದರು.
ಮಣಿಪಾಲ ಬಾರ್ ಮಾಲಕರಿಗೆ ಸೂಚನೆ
ಮಣಿಪಾಲದಲ್ಲಿನ ಬಾರ್, ಅಪಾರ್ಟ್‌ಮೆಂಟ್ ಹಾಗೂ ಹೊಸ ವರ್ಷ ಆಚರಣೆ ಮಾಡುವ ಸಂಘಟಕರ ಸಭೆಯನ್ನು ಇಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕರೆದು ಸಲಹೆ ಸೂಚನೆಗಳನ್ನು ನೀಡಲಾಯಿತು.
ಎಲ್ಲ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಕಾನೂನು ಉಲ್ಲಂಘನೆಗಳನ್ನು ಮಾಡಬಾರದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಂಚಾರ ಸಮಸ್ಯೆ ಆಗದಂತೆ ಕ್ರಮ ವಹಿಸ ಬೇಕು ಎಂದು ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಸೂಚನೆ ನೀಡಿದರು.