ರಂಗಭೂಮಿ ಕಟ್ಟುವ ಕ್ರಿಯೆಯೇ ಹೊರತು ಒಡೆಯುವುದಲ್ಲ: ಜೀವನ್‌ರಾಂ ಸುಳ್ಯ
ಉಡುಪಿ: ರಂಗಭೂಮಿಯು ಮಕ್ಕಳಲ್ಲಿ ಏಕಾಗ್ರತೆ, ಪ್ರೀತಿ, ಸಂಬಂಧ ಬೆಳೆಸುತ್ತದೆ. ರಂಗಭೂಮಿ ಕಟ್ಟುವ ಕಾರ್ಯ ಮಾಡು ತ್ತದೆಯೇ ಹೊರತು ಒಡೆಯುವ ಕ್ರಿಯೆ ಅಲ್ಲ ಎಂದು ಹಿರಿಯ ರಂಗಕರ್ಮಿ ಹಾಗೂ ಯಕ್ಷ ರಂಗಾಯಣದ ಮಾಜಿ ನಿರ್ದೇಶಕ ಡಾ.ಜೀವನ್ ರಾಮ್ ಸುಳ್ಯ ಹೇಳಿದ್ದಾರೆ.
ಉಡುಪಿ ರಂಗಭೂಮಿಯ ರಂಗ ಶಿಕ್ಷಣದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ನಡೆದ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ರಂಗಭೂಮಿಯು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪರಿಣಾಮಕಾರಿ ಮಾಧ್ಯಮವಾಗಿದೆ. ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳು ಹಾಳಾಗುತ್ತಾರೆ ಎಂಬುದು ಸುಳ್ಳು ಎಂದ ಅವರು, ರಂಗಭೂಮಿಯು ಜಾತಿ, ಧರ್ಮ, ಪಂಥಗಳನ್ನು ಮೀರಿ ಒಂದಾಗುವ ರಂಗಮಂದಿರ. ಇದರಲ್ಲಿ ಯಾವುದೇ ಪಂಥಗಳ ಹೇರಿಕೆ ಇಲ್ಲಿ ಇರುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ಉದ್ಯಮಿ ಗಳಾದ ಸಾಧು ಸಾಲ್ಯಾನ್, ಸತ್ಯಾನಂದ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ರಂಗ ಶಿಕ್ಷಣದ ಸಂಚಾಲಕ ವಿದ್ಯಾವಂತ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಹ ಸಂಚಾಲಕಿ ಅಮಿತಾಂಜಲಿ ಕಿರಣ್ ಕಾರ್ಯ ಕ್ರಮ ನಿರೂಪಿಸಿದರು.