ದಲಿತ ಶಿಕ್ಷಕಿಗೆ ದೌರ್ಜನ್ಯ ಎಸಗಿದ ಆರೋಪಿಗಳ ಬಂಧನಕ್ಕೆ ಆಗ್ರಹ
ಕುಂದಾಪುರ, ಡಿ.30: ಉಪ್ಪಿನಕುದ್ರು ಸರಕಾರಿ ಫ್ರೌಢಶಾಲಾ ದಲಿತ ಮುಖ್ಯ ಶಿಕ್ಷಕಿ ಮಾಲತಿಯವರಿಗೆ ಅದೇ ಶಾಲೆಯ ಸಹ ಶಿಕ್ಷಕಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಸೇರಿಕೊಂಡು ನಿರಂತರ ಕಿರುಕುಳ ನೀಡಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯದಡಿ ಕೇಸು ದಾಖಲಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಕುಂದಾಪುರ ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್.ವಿಜಯ್ ಆಗ್ರಹಿಸಿದ್ದಾರೆ.
ದೌರ್ಜನ್ಯಕ್ಕೊಳಗಾದ ದಲಿತ ಮುಖ್ಯ ಶಿಕ್ಷಕಿಗೆ ಜಿಲ್ಲಾಡಳಿತ ಸಾಂತ್ವಾನ ಹೇಳಿ ರಕ್ಷಣೆ ನೀಡುವುದನ್ನ ಬಿಟ್ಟು ಕ್ಷೇತ್ರ ಶಿಕ್ಷಣಾಧಿ ಕಾರಿಯವರನ್ನ ಬಳಸಿಕೊಂಡು ಯಾವುದೇ ಇಲಾಖಾ ಮಟ್ಟದಲ್ಲಿ ಕಾನೂನು ಪ್ರಕಾರ ತನಿಖೆ ಮಾಡದೇ ದೌರ್ಜನ್ಯ ಕ್ಕೊಳಗಾದ ದಲಿತ ಶಿಕ್ಷಕಿಯ ಮೇಲೆ ಸುಳ್ಳು ಕೌಂಟರ್ ದೂರನ್ನು ನೀಡಲಾಗಿದೆ. ಅಲ್ಲದೇ ಸಹ ಶಿಕ್ಷಕಿ ನಂದಾ ಎನ್.ವಿ ಇವರನ್ನು ಕೂಡಲೇ ಬಂಧಿಸಿ ಅಮಾನತಿನಲ್ಲಿಡಬೇಕು. ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಶೇರುಗಾರ್ ಅವರನ್ನು ಎಸ್.ಡಿ.ಎಂ.ಸಿ ಹುದ್ದೆಯಿಂದ ವಜಾಗೊಳಿಸಿ ಬಂಧಿಸ ಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.