ಹುತಾತ್ಮ ಯೋಧ ಅನೂಪ್ ಸ್ಮಾರಕ ನಿರ್ಮಾಣಕ್ಕೆ ಗ್ರಾಪಂ ನಿರ್ಣಯ

Update: 2024-12-30 16:28 GMT

ಕುಂದಾಪುರ, ಡಿ.30: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಉರುಳಿ ಬಿದ್ದ ಅಪಘಾತದಲ್ಲಿ ಹುತಾತ್ಮ ರಾದ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕೆರೆಮನೆ ನಿವಾಸಿ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ಅವರ ಸ್ಮಾರಕವನ್ನು ಸರಕಾರಿ ಸ್ಥಳದಲ್ಲಿಯೇ ನಿರ್ಮಾಣ ಮಾಡುವ ಬಗ್ಗೆ ಬೀಜಾಡಿ ಗ್ರಾಪಂ ಇಂದು ನಿರ್ಣಯ ಮಾಡಿದೆ.

ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಮಿತ್ರಸೌಧದಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಸರ್ವ ಸದ್ಯಸರು ಈ ಕುರಿತು ತೀರ್ಮಾನಿಸಿ ನಿರ್ಣಯಿಸಿದರು. ಈ ಸಂದರ್ಭ ಆಗಲಿದ ವೀರ ಯೋಧನಿಗೆ ಸ್ಥಳೀಯಾಡಳಿತದಿಂದ ಶ್ರದ್ಧಾಂಜಲ್ಲಿ ಅರ್ಪಿಸಲಾಯಿತು.

ಸೇನಾ ಮೇಜರ್ ಭೇಟಿ: 1-ಮರಾಠ ಲೈಟ್ ಇನ್ಪೆಂಟ್ರಿ ರೆಜೆಮೆಂಟ್ ಯೂನಿಟ್ ಮೇಜರ್ ನಿಖಿಲ್ ಹಾಗೂ ನಾಯಬ್ ಸುಬೇದರ್ ಶಂಕರ ಗೌಡ ಪಾಟೀಲ್, ಅನೂಪ್ ಅವರ ಮನೆಗೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.

ಮೇಜರ್ ನಿಖಿಲ್ ಮಾತನಾಡಿ, ನಮ್ಮ ಯೂನಿಟ್‌ನಲ್ಲಿ ಅನೂಪ್ ಅತಿ ಹೆಮ್ಮೆ ಪಡುವ ಸೈನಿಕ. ಅನೂಪ್ ಹೋಗುತ್ತಿದ್ದ ಸೇನಾ ವಾಹನದ ಹಿಂದೆಯೇ ನನ್ನ ವಾಹನವಿತ್ತು. ಅತಿ ಆಳವಾದ ಕಂದಕ್ಕೆ ಬಿದ್ದ ವಾಹನದಿಂದ ಅನೂಪ್ ಅವರನ್ನು ಮೇಲೆ ತರಲು ಬಹಳ ಹರಸಾಹಸಪಡಬೇಕಾಯಿತು. ಅತಿ ಶೀಘ್ರವಾಗಿ ವಿಶೇಷ ಕಾರ್ಯಚಾರಣೆ ನಡೆಸಿ ಆಸ್ಪತ್ರೆಗೆ ತಂದು ಸೇರಿಸಿದರೂ ಬದುಕಿಸಿಕೊಳ್ಳುವುದು ಕಷ್ಟವಾಯಿತು ಎಂದರು.

ಅನೂಪ್ ಅಪಘಾತದಲ್ಲಿ ಮಡಿದದ್ದಲ್ಲ. ಯುದ್ದ ಮಾಡಿ ಗೆದ್ದು ವೀರಮರಣ ಹೊಂದಿದ್ದಾರೆ ಎಂಬ ಭಾವನೆ ನಮ್ಮಲ್ಲಿರಬೇಕು. ಅವರು ದೇಶಕ್ಕೆ ಪ್ರಾಣಕೊಟ್ಟ ಮಗ. ಇಡೀ ಕುಟುಂಬ ಒಂದಾಗಿರಿ. ನಿಮ್ಮ ಜೊತೆ ಇಡೀ ಸೇನಾ ಪಡೆಯೇ ನಿಂತಿದೆ. ಸರಕಾರದಿಂದ ಸಿಗುವ ಎಲ್ಲಾ ಪರಿಹಾರ ಹಾಗೂ ಪತ್ನಿಗೆ ಸರಕಾರಿ ಕೆಲಸ ಸಿಗುವ ಎಲ್ಲಾ ಕೆಲಸಗಳನ್ನು ನಮ್ಮ ಇಲಾಖೆಯಿಂದಲೂ ಶ್ರಮವಹಿಸಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ರವಿ ಶೆಟ್ಟಿ ತೆಕ್ಕಟ್ಟೆ ಮೊದಲಾದವರಿದ್ದರು.

ಅನೂಪ್ ಉತ್ತರಕ್ರಿಯೆ: ಅನೂಪ್ ಪೂಜಾರಿಯ ಉತ್ತರ ಕ್ರಿಯೆಯು 5ನೇ ದಿನವಾದ ಸೋಮವಾರ ಬೀಜಾಡಿ ಕಡಲ ತೀರದ ಅನೂಪ್ ಅವರ ಅಂತ್ಯ ಸಂಸ್ಕಾರ ನಡೆಸಿದ ಸ್ಥಳದಲ್ಲಿ ಕುಟುಂಬಿಕರು ಆರಂಬಿಸಿದ್ದಾರೆ.

ಬಿಲ್ಲವ ಸಾಮುದಾಯದ ಪದ್ದತಿಯಂತೆ ಗುರಿಕಾರರಾದ ರಾಮ ಪೂಜಾರಿ ನೇತೃತ್ವದಲ್ಲಿ ಅನೂಪ್ ಸಹೋದರ ಸಂಬಂಧಿ ತಿಲಕ್ ಮತ್ತು ಶಿವರಾಮ್ ನೇತೃತ್ವದಲ್ಲಿ ಉತತಿರ ಕ್ರಿಯೆಯ ಪದ್ಧತಿಗಳನ್ನು ಆರಂಭಿಸಲಾಗಿದೆ.

ಶ್ರೀವಿಖ್ಯಾತಾನಂದ ಸ್ವಾಮೀಜಿ ಭೇಟಿ

ಹುತಾತ್ಮ ಯೋಧ ಅನುಪ್ ಪೂಜಾರಿ ಅವರ ಬೀಜಾಡಿಯ ಮನೆಗೆ ಸೊಲೂರು ಆರ್ಯ ಈಡಿಗ ಮಹಾಸಂಸ್ಥಾನ ಶ್ರೀರೇಣುಕಾ ಎಲ್ಲಮ್ಮದೇವಿ ಮಠದ ಶ್ರೀವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.

ಮೃತ ಯೋಧನ ಮಗುವಿನ ಬಾಲ್ಯದ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲ ವನ್ನು ತಮ್ಮ ಮಠದಿಂದ ಭರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅನೂಪ್ ಅವರ ತಾಯಿ, ಪತ್ನಿ, ಸಹೋದರ ಶಿವರಾಮ ಅಮೀನ್, ಬಿಲ್ಲವ ಸಮಾಜದ ರಾಜೇಶ್ ಕಡ್ಗಿಮನೆ, ರಾಘು ವಿಠಲವಾಡಿ, ಅಬಿಷೇಕ್ ಪೂಜಾರಿ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News