ಕೋಡಿ ಬ್ಯಾರೀಸ್ ನಿಂದ ‘ಸ್ವಚ್ಛತಾ ಜಾಗೃತಿ’, ‘ಮಾದಕ ವ್ಯಸನಮುಕ್ತ ಕೋಡಿ’ ಅಭಿಯಾನ
ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ, ‘ಸ್ವಚ್ಛತಾ ಜಾಗೃತಿ’, ‘ಮಾದಕ ವ್ಯಸನ ಮುಕ್ತ ಕೋಡಿ’ ಅಭಿಯಾನ ಶುಕ್ರವಾರ ನಡೆಯಿತು.
ಧ್ವಜಾರೋಹಣಗೈದು ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪರಿಸರವಾದಿ, ಡಾ.ಅಶೋಕ್ ಕುಂದಾಪುರ, ನಾವು ನಮ್ಮ ಮೂಲಭೂತ ಸೌಲಭ್ಯಕ್ಕಾಗಿ ಈಗಾಗಲೇ ಕಷ್ಟಪಡುತ್ತಿದ್ದೇವೆ. ಪರಿಸರವನ್ನು ಸ್ವಚ್ಛವಾಗಿ ಉಳಿಸಿಕೊಂಡು, ಆರೋಗ್ಯ ಉಳಿಸಿಕೊಳ್ಳುವುದರೊಂದಿಗೆ ಆರೋಗ್ಯವಂತ ಭಾರತ ನಿರ್ಮಿಸಬೇಕು. ಪರಿಸರ ಉಳಿಸುವ ಜವಾಬ್ದಾರಿಯನ್ನು ಮಕ್ಕಳೇ ತೆಗೆದುಕೊಳ್ಳಬೇಕು. ತಮ್ಮ ಹುಟ್ಟುಹಬ್ಬದ ದಿನ ಗಿಡಗಳನ್ನು ನೆಡುವಂತೆ ಅವರು ಮನವಿ ಮಾಡಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ನಮ್ಮ ಜೀವನದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಮುಖ್ಯ. ಅದರಲ್ಲಿ ನಾವು ಕರ್ತವ್ಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು ಮತ್ತು ಅದೇ ನಮ್ಮ ಮುಖ್ಯ ಧ್ಯೇಯವಾಗಬೇಕು. ಭಾರತ ವಿಶ್ವವನ್ನು ಮುನ್ನಡೆಸುವ ಸಮಯ ಬಂದಿದೆ. ನಮ್ಮ ದೇಶವನ್ನು ಸ್ವಚ್ಛ, ಸುಂದರ ದೇಶವಾಗಿ, ಪ್ರೀತಿಯ ದೇಶವಾಗಿ ಪರಿವರ್ತಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ ಶುಭ ಹಾರೈಸಿದರು.
ಬ್ಯಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯಶೀಲ ಶೆಟ್ಟಿ ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರರು ವಿವಿಧ ತಂಡಗಳನ್ನು ರಚಿಸಿ ಮನೆ ಮನೆಗೆ ಭೇಟಿ ನೀಡಿ ‘ಸ್ವಚ್ಛತಾ ಜಾಗೃತಿ’ ಮತ್ತು ‘ಮಾದಕ ವ್ಯಸನ ಮುಕ್ತ ಕೋಡಿ’ ಅಭಿಯಾನದಲ್ಲಿ ಭಾಗವಹಿಸಿದರು.
ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯ ಜವಾಬ್ದಾರಿ, ಕಸ ವಿಲೇವಾರಿ, ಕಸ ವಿಂಗಡಣೆ, ಜಲ ಸಂರಕ್ಷಣೆ ಹಾಗೂ ಸಾವಯವ ಗೊಬ್ಬರ ತಯಾರಿಸುವ ಕುರಿತು ಕೋಡಿ ಜನರಿಗೆ ಮಾಹಿತಿ ನೀಡಿವುದರ ಮೂಲಕ ನಮ್ಮ ಸಂಸ್ಥೆಯಿಂದ ಪ್ರತೀ ತಿಂಗಳ ಕೊನೆಯ ರವಿವಾರ ನಡೆಯುವ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮಾದಕ ವ್ಯಸನ ಮುಕ್ತ ಕೋಡಿಗೆ ಕರೆಕೊಟ್ಟರು.