ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿವಾದ: ಮೂವರು ವಿದ್ಯಾರ್ಥಿನಿಯರ ಅಮಾನತು; ಪೊಲೀಸರಿಂದ ತನಿಖೆ

Update: 2023-07-25 13:10 GMT

ಉಡುಪಿ: ವಾರದ ಹಿಂದೆ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಚಿತ್ರೀಕರಣ ಮಾಡಿದ್ದಾರೆನ್ನಲಾದ ಘಟನೆ ಇದೀಗ ವಾರದ ಬಳಿಕ ವಿವಾದವಾಗಿ ಮಾರ್ಪಟ್ಟಿದೆ. ಈ ಸಂಬಂಧ ಯಾವುದೇ ವಿಡಿಯೋ ಸಿಗದಿದ್ದರೂ, ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡದಿದ್ದರೂ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲಾಗಿದೆ.

ಜು.18ರಂದು ನಡೆದ ಈ ಘಟನೆಗೆ ಸಂಬಂಧಿಸಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಕೂಡಲೇ ಅಮಾನತುಗೊಳಿಸಿ, ವಿದ್ಯಾರ್ಥಿನಿಯರ ಕೈಯಲ್ಲಿದ್ದ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎನ್ನಲಾದ ಮೊಬೈಲ್‌ನ್ನು ಪೊಲೀಸರಿಗೆ ಒಪ್ಪಿಸಿತ್ತು. ಆದರೆ ತನಿಖೆಗೆ ಒಳಪಡಿಸಲಾದ ಈ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಸಿಕ್ಕಿಲ್ಲ ಮತ್ತು ವಿಡಿಯೋ ಫಾರ್ವಡ್ ಆಗಿರುವ ಬಗ್ಗೆ ತಿಳಿದುಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.

ತಮಾಷೆಗಾಗಿ ರೆಕಾರ್ಡಿಂಗ್

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ಘಟನೆ ನಮ್ಮ ಗಮನಕ್ಕೆ ಬಂದ ಕೂಡಲೇ ಪ್ರಾಥಮಿಕ ಪರಿಶೀಲನೆ ನಡೆಸಿದ್ದೇವೆ. ಮರುದಿನ ಮೂವರು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಮೊಬೈಲ್ ಒಪ್ಪಿಸಿದ್ದೇವೆ. ಅಲ್ಲದೇ ಕೂಡಲೇ ಮೂವರು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿ ಕ್ರಮ ಕೈಗೊಂಡಿದ್ದೇವೆ ಎಂದರು.

‘ಇವರು ಮೂವರು ಒಂದೇ ವರ್ಷದ ಬೇರೆ ಬೇರೆ ಕೋರ್ಸ್‌ಗಳ ವಿದ್ಯಾರ್ಥಿ ಗಳಾಗಿದ್ದು, ಇವರ ಮಧ್ಯೆ ಸಲುಗೆ ಇತ್ತು. ಆ ಕಾರಣಕ್ಕಾಗಿ ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ತಿಳಿಸಿದ್ದಾರೆ. ಸಂತ್ರಸ್ತೆ ಕೂಡ ಪೊಲೀಸರ ಮುಂದೆ ಈ ಬಗ್ಗೆ ಲಿಖಿತ ಹೇಳಿಕೆ ನೀಡಿದ್ದು, ಅವರು ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಅವರ ಮತ್ತು ನನ್ನ ಭವಿಷ್ಯ ನನಗೆ ಮುಖ್ಯ ವಾಗಿದೆ. ಆದುದರಿಂದ ಯಾವುದೇ ದೂರು ನೀಡುವುದಿಲ್ಲ ಎಂದು ಹೇಳಿರುವುದಾಗಿ ರಶ್ಮಿ ತಿಳಿಸಿದರು.

ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡಲು ಜಾಗ ಇಲ್ಲ. ಶೌಚಾಲಯದ ಹೊರಗಡೆ ನಿಂತು ಮೇಲ್ಭಾಗದಲ್ಲಿ ತಮ್ಮ ಕೈಯಲ್ಲಿ ಮೊಬೈಲ್ ಹಿಡಿದು ಚಿತ್ರೀಕರಣ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಶೌಚಾಲಯದಲ್ಲಿದ್ದ ವಿದ್ಯಾರ್ಥಿನಿ ನೋಡಿ ಮಾಹಿತಿ ನೀಡಿದ್ದಾರೆ. ಬಳಿಕ ಮೂವರು ವಿದ್ಯಾರ್ಥಿನಿ ಯರನ್ನು ಕರೆಸಿ ಮೊಬೈಲ್ ಒಪನ್ ಮಾಡಿ ನೋಡಿದ್ದೇವೆ. ಅಲ್ಲಿ ಯಾವುದೇ ವಿಡಿಯೋ ಇರಲಿಲ್ಲ. ಅವರೇ ವಿಡಿಯೋ ಡಿಲೀಟ್ ಮಾಡಿರುವುದಾಗಿ ತಿಳಿಸಿ ದರು. ವಿಡಿಯೋ ರೆಕಾರ್ಡ್ ಸರಿಯಾಗಿ ಆಗಿಲ್ಲ ಎಂದು ಆ ಮೂವರು ವಿದ್ಯಾರ್ಥಿನಿಯರೇ ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಮಕ್ಕಳ ಮಧ್ಯೆ ಧರ್ಮ ಬೇಧ ಇಲ್ಲ’

‘ನಮ್ಮಲ್ಲಿ ನಡೆದ ಘಟನೆಗೆ ಧರ್ಮದ ಲೇಪ ಹಚ್ಚಬಾರದು. ಈ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯರ ಧರ್ಮಕ್ಕೆ ಸೇರಿದ ಹಲವು ಮಕ್ಕಳು ನಮ್ಮಲ್ಲಿ ಇದ್ದಾರೆ. ಅವರೆಲ್ಲ ಈ ಘಟನೆ ವಿರುದ್ಧ ಗಟ್ಟಿ ಧ್ವನಿಯಿಂದ ಪ್ರತಿಭಟನೆ ಮಾಡಿ ದ್ದಾರೆ. ಇಲ್ಲಿ ಯಾವುದೇ ಕೋಮು, ಧರ್ಮದ ಲೇಪ ಇಲ್ಲ ಎಂದು ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.

ಕಾಲೇಜಿನ ಮೊಬೈಲ್ ನಿಷೇಧಿಸಲಾಗಿದ್ದು, ಅದನ್ನು ಉಲ್ಲಂಘಿಸಿ ಇವರು ಮೊಬೈಲ್ ತಂದಿದ್ದಾರೆ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ತಪ್ಪೊಪ್ಪಿಗೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಮೊಬೈಲ್‌ನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಡಿಯೋ ನಮಗೆ ಸಿಕ್ಕಿಲ್ಲ ಮತ್ತು ಅವರ ವಿರುದ್ಧ ದೂರು ಕೊಡಲು ನಮಗೆ ಯಾವುದೇ ಕಾರಣ ಇರಲಿಲ್ಲ. ಹಾಗಾಗಿ ಆಡಳಿತ ಮಂಡಳಿ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

‘ಈ ರೀತಿಯ ಘಟನೆ ಇಲ್ಲಿ ಈ ಹಿಂದೆ ನಡೆದಿತ್ತು ಎಂಬುದು ಸುಳ್ಳು. ಯಾವುದೇ ರೀತಿಯ ವಿಷಯವನ್ನು ಸತ್ಯಾಂಶ ತಿಳಿದುಕೊಳ್ಳದೆ ಸುಳ್ಳು ಸುದ್ದಿ ಮತ್ತು ಗೊಂದಲ ಉಂಟು ಮಾಡುವ ವಿಚಾರಗಳನ್ನು ಯಾರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು. ಯಾಕೆಂದರೆ ಇಲ್ಲಿ ಬೇರೆ ಮಕ್ಕಳು ಕೂಡ ಕಲಿಯುತ್ತಿದ್ದಾರೆ. ಅವರ ಭವಿಷ್ಯ ಕೂಡ ನಮಗೆ ಮುಖ್ಯ’

-ರಶ್ಮಿ, ನಿರ್ದೇಶಕಿ, ಪ್ಯಾರಾ ಮೆಡಿಕಲ್ ಕಾಲೇಜು

‘ಈ ರೀತಿಯ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ವಿಡಿಯೋ ಕ್ಲಿಪಿಂಗ್ ಇದಿಯೋ ಇಲ್ಲವೋ ಗೊತ್ತಿಲ್ಲ. ಇದರ ಬಗ್ಗೆ ನನಗೆ ಸಂಶಯ ಇದೆ. ಇದರಲ್ಲಿ ಬ್ಲಾಕ್ ಫೈಲ್ ಮಾಡುವ ಷಡ್ಯಂತ್ರ ಇರಬಹುದು. ಮೂರು ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು. ಈ ವಿಚಾರ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತರುತ್ತೇವೆ’

-ಯಶ್‌ಪಾಲ್ ಸುವರ್ಣ, ಶಾಸಕರು, ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News