ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ: ಶಾಸಕ ಜೆ.ಟಿ.ಪಾಟೀಲ್
ಕುಂದಾಪುರ: ಬಿಜೆಪಿ- ಜೆಡಿಎಸ್ ಲೋಕಸಭಾ ಚುನಾವಣೆಯ ಮೈತ್ರಿ ಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಅಸ್ಥಿತ್ವ ಕಳೆದುಕೊಂಡಿದೆ. ಹಿಂದಿನಿಂದಲೂ ದೇವೆಗೌಡರು ಜಾತ್ಯಾತೀತ ಸಿದ್ದಾಂತವನ್ನು ಪ್ರತಿ ಪಾದಿಸುತ್ತಿದ್ದು ಈ ಬಾರಿ ಜಾತ್ಯಾತೀತ ಸಿದ್ದಾಂತಕ್ಕೆ ಬ್ರೇಕ್ ಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಕಡೆಗಳಲ್ಲಿ ಸೋತಿರುವ ಜೆಡಿಎಸ್ ಗೆ ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಚಿಂತೆಯಾಗಿದೆ. ಅದರಿಂದಲೇ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್ ಟೀಕಿಸಿದ್ದಾರೆ.
ಮಂಗಳವಾರ ಖಾಸಗಿ ಕೆಲಸದ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ ವೇಳೆ ನಗರದ ಶರೋನ್ ಹೊಟೇಲ್‌ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ದರು. ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ನಾನು ಬೇಸರವಿಲ್ಲ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾದಾಗ ಬೇರೊಬ್ಬರನ್ನು ಸಚಿವರನ್ನಾಗಿ ಮಾಡಲು ಹೇಳಿದ್ದೆ. ಹಣ, ಸೀರೆ, ಇಸ್ತ್ರೀ ಪೆಟ್ಟಿಗೆ, ಸಕ್ಕರೆಗಳನ್ನು ಹಂಚಿ ನನ್ನ ವಿರುದ್ದ ಚುನಾವಣೆ ಎದುರಿಸಿದ ಬಿಜೆಪಿಯ ಪ್ರಬಲ ನಾಯಕನ ವಿರುದ್ದ ಗೆಲುವು ಕಂಡು ನಾಲ್ಕನೆ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಿಗಮ ಮಂಡಳಿ ಸಿಗುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಕಾಂಗ್ರೆಸ್ ಭಾಗ್ಯಗಳ ಕುರಿತು ಟೀಕೆ ಮಾಡುವ ಬಿಜೆಪಿಗರು ಪ್ರಧಾನಿ ಮೋದಿ ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರ ಭಾಗ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಜೊತೆಗೆ ರಾಜ್ಯವನ್ನು ಅಭಿವೃದ್ದಿಪಥದಲ್ಲಿ ಕೊಂಡೊಯ್ಯುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜನಸ್ಪಂದನ ಕಾರ್ಯಕ್ರಮ ಚುರುಕು ಪಡೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಕೆಲ ವರ್ಷಗಳ ಹಿಂದೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾದಾಗ ಈ ಕ್ಷೇತ್ರದಲ್ಲಿ 15 ದಿನ ಇದ್ದು ಅವರ ಪರ ಕೆಲಸ ಮಾಡಿದ್ದೇನೆ. ಅಲ್ಲಿಂದ ಸ್ಥಳೀಯ ಕಾಂಗ್ರೆಸ್ ಮುಖಂಡ, ನನ್ನ ಕಿರಿಯ ಸ್ನೇಹಿತ ಅಶೋಕ್ ಪೂಜಾರಿಯವರ ಪರಿಚಯ. ಖಾಸಗಿ ಕೆಲಸದ ನಿಮಿತ್ತ ಮಂಗಳೂರಿಗೆ ಬಂದಿದ್ದೆ. ಈ ವೇಳೆ ಅಶೋಕ ಪೂಜಾರಿ ಯವರನ್ನು ಭೇಟಿ ಯಾಗಿದ್ದೇನೆ ಎಂದು ಜೆ.ಟಿ.ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಪೂಜಾರಿ ಹೇರಿಕುದ್ರು, ಕುಂದಾಪುರ ಬ್ಲಾಕ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕೋಡಿ ಉಪಸ್ಥಿತರಿದ್ದರು.