ಅಪೌಷ್ಠಿಕ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ನ.15: ಅಪೌಷ್ಠಿಕ ಮಕ್ಕಳ ಕುರಿತಂತೆ ತಾಯಂದಿರು ವಿಶೇಷ ಮುತುವರ್ಜಿ ವಹಿಸಬೇಕು. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇದ್ದಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆ ಕಂಡುಬರುವ ಸಾಧ್ಯತೆ ಇದ್ದು, ತಾಯಂದಿರು ಪೌಷ್ಠಿಕತೆ ಕುರಿತಂತೆ ವಿಶೇಷ ಗಮನ ನೀಡಿ ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲು ಹಾಗೂ ಆರೋಗ್ಯಯುತ ಆಹಾರವನ್ನು ನೀಡುವುದರಿಂದ ಅಪೌಷ್ಠಿಕತೆಯನ್ನು ನಿವಾರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಶುಕ್ರವಾರ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಗೂ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನವಜಾತ ಶಿಶುವಿನ ಅವಧಿಯು ಮಕ್ಕಳ ಜೀವನದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಮಗುವಿಗೆ ಎದೆಹಾಲು, ಪೌಷ್ಠಿಕ ಆಹಾರ, ಒಂದು ವರ್ಷದ ಅವಧಿಯೊಳಗೆ ನೀಡುವುದರೊಂದಿಗೆ ಉತ್ತಮವಾಗಿ ಆರೈಕೆ ಮಾಡಿದಲ್ಲಿ ಮಗುವಿನ ಭವಿಷ್ಯದ ಬೆಳವಣಿಗೆ ಸಹ ಉತ್ತಮವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಮಗು ಜನಿಸಿದ ಆರಂಭಿಕ ಹಂತದಲ್ಲಿ ಹೆಚ್ಚಿನ ಕಾಳಜಿ ಅತ್ಯವಶ್ಯಕವಾಗಿದ್ದು, ಹುಟ್ಟಿನಿಂದ ಮಕ್ಕಳಿಗೆ ನೀಡಬೇಕಾದ ಲಸಿಕೆಯ ಕುರಿತು ಯಾವುದೇ ನಿರ್ಲಕ್ಷ್ಯ ತೋರದೆ ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ನೀಡುವುದರ ಜೊತೆಗೆ ಮನೆಯ ವಾತಾವರಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸರಿಯಾದ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಅನೇಕ ಬಾರಿ ಗರ್ಭಿಣಿ ಮಹಿಳೆಯರು ಹೆರಿಗೆಗೆ ಮುಂಚಿತ ಸಾಯುವ ಉದಾಹರಣೆಯೂ ಇದೆ.ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಗೆ ಬಂದ ಸಂದರ್ಭದಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಅವರು ನೀಡಿದ ಆರೋಗ್ಯ ಸಲಹೆಗಳನ್ನು ಪಾಲನೆ ಮಾಡಬೇಕು ಎಂದು ಅವರು ಗರ್ಭಿಣಿಯರು ಹಾಗೂ ತಾಯಂದಿರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್ ಮಾತನಾಡಿ, ಮಕ್ಕಳಲ್ಲಿ ಪದೇ ಪದೇ ರೋಗ ಗಳು ಕಂಡುಬರುವುದಕ್ಕೆ ಮೊದಲೇ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸರ್ವಾಂಗೀಣ ಬೆಳವಣಿಗೆಗೆ ಜಾಗೃತಿ ವಹಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರು ಸ್ವಚ್ಚತೆ ಹಾಗೂ ಪೌಷ್ಠಿಕ ಆಹಾರ ಸೇವನೆ ಕುರಿತಂತೆ ಜಾಗೃತಿ ವಹಿಸಬೇಕು ಎಂದರು.
ಜಿಲ್ಲಾ ಸರ್ಜನ್ ಡಾ. ಅಶೋಕ್ ಹೆಚ್ ಮಾತನಾಡಿ, ಆರೋಗ್ಯ ಸಿಬ್ಬಂದಿ ಗಳು ನೀಡುವ ಮಾರ್ಗದರ್ಶನವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವ ಜೊತೆಗೆ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ತಾಯಿಯ ಎದೆಹಾಲನ್ನು ಮಗು ವಿಗೆ ಪೂರ್ಣ ಪ್ರಮಾಣದಲ್ಲಿ ನೀಡಿದಾಗ ಮಕ್ಕಳಲ್ಲಿ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಜಿಲ್ಲಾ ಎಂ.ಸಿ.ಹೆಚ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ವೇಣುಗೋಪಾಲ್ ನವಜಾತ ಶಿಶು ಜಾಗೃತಿ ಸಪ್ತಾಹದ ಕುರಿತು ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮಹಾದೇವ ಭಟ್ ನ್ಯುಮೋನಿಯಾವನ್ನು ತಡೆಗಟ್ಟಲು ತೆಗೆದು ಕೊಳ್ಳಬೇಕಾದ ಜಾಗೃತಿ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ನ್ಯುಮೋನಿಯಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮದ ಕುರಿತ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಗೋಪಾಲ್ ಭಂಡಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ಆಶಾ ಕಾರ್ಯ ಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಆರ್.ಸಿ. ಹೆಚ್ ಅಧಿಕಾರಿ ಡಾ.ಜೋತ್ಸ್ನಾ ಬಿ.ಕೆ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯ ಕ್ರಮ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ವಂದಿಸಿದರು.