ಗ್ಯಾರಂಟಿ ಯೋಜನೆ ಯಥಾವತ್ ಮುಂದುವರಿಕೆ; ಯಾವುದೇ ಕತ್ತರಿ ಇಲ್ಲ: ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

Update: 2024-08-15 14:38 GMT

ಉಡುಪಿ, ಆ.15: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಚರ್ಚೆ ಸರಕಾರದ ಮುಂದಿಲ್ಲ. ಯೋಜನೆಗಳಿಗೆ ಸರಕಾರ ಯಾವುದೇ ಕಾರಣಕ್ಕೂ ಕತ್ತರಿ ಹಾಕುವುದಿಲ್ಲ, ಪುನವಿರ್ಮಶೆ ಮಾಡುವುದಿಲ್ಲ. ಗ್ಯಾರಂಟಿ ಯೋಜನೆಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ, ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿ ಸುವ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಹಾಗೆಯೇ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಭರವಸೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದ್ದು, ಹಿಂದಿನಂತೆಯೇ ಯಥಾವತ್ತಾಗಿ ಮುಂದುವರಿಯ ಲಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಜಾರಿಗೆ ತರಲಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರೂ ಅನ್ಯತಾ ವ್ಯಾಖ್ಯಾನಿಸಬಾರದು ಎಂದು ಮನವಿ ಮಾಡಿದರು.

ಪರಿಷ್ಕರಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿರಲಿಕ್ಕಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಎಲ್ಲರ ಧ್ವನಿಯೂ ಒಂದೇ, ಗ್ಯಾರಂಟಿ ಯೋಜನೆ ಮುಂದುವರಿಯಬೇಕು ಅಂತ. ಚುನಾವಣೆಗಾಗಿ ಸ್ವಾರ್ಥದ ರಾಜಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ. ಮಹಿಳೆಯರ ಸಬಲೀಕರಣ, ಬಡವರ ಉದ್ದಾರ ನಮ್ಮ ಉದ್ದೇಶ. ಇವತ್ತಿನವರೆಗೆ ಇರುವ ಮಾನದಂಡ ದಲ್ಲೇ ಯೋಜನೆಗಳು ಮುಂದುವರಿಯಲಿವೆ. ಜನರಿಗೆ ಕೊಟ್ಟಂತಹ ಭಾಷೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.

ಜಿಲ್ಲೆಯಲ್ಲಿ 200 ಕೋಟಿ ನಷ್ಟ: ಕಳೆದ ತಿಂಗಳು ವಾಡಿಕೆಗಿಂತ ಬಿದ್ದ ಅಧಿಕ ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ 200 ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಜಿಲ್ಲಾಡಳಿತದ ಬಳಿ ಇರುವ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೇಳಿದರು.

ಭಾರಿ ಮಳೆಯಿಂದಾಗಿ ಮನೆ, ರಸ್ತೆ , ಕಾಲು ಸಂಕ, ಸೇತುವೆಗಳು ಹೀಗೆ ಬಹಳಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿವೆ. ಅಭಿವೃದ್ಧಿಯೆಂದರೆ ಆಶ್ರಯ, ಅಭಿವೃದ್ಧಿ ಎಂದರೆ ಅಕ್ಷರ, ಅಭಿವೃದ್ಧಿ ಅಂದರೆ ಆರೋಗ್ಯ, ಅನ್ನಭಾಗ್ಯ, ಆರ್ಥಿಕ ಸಬಲೀಕರಣ ಎಂದ ಸಚಿವೆ, ಕಳೆದ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಗೆ 900 ಕೋಟಿ ರೂ. ಹಣ ಬಿಡುಗಡೆಯಾಗಿದೆ. ವಿವಿಧ ಯೋಜನೆ, ವಿವಿಧ ಗ್ಯಾರಂಟಿಯಿಂದ ಇಷ್ಟು ಹಣ ಬಂದಿದೆ ಎಂದು ಅವರು ಬಿಜೆಪಿ ಶಾಸಕರ ಟೀಕೆಗಳಿಗೆ ಉತ್ತರಿಸಿದರು.

ಅಭಿವೃದ್ಧಿ ಅಂದರೆ ಬರಿ ರಸ್ತೆ ಮಾಡುವುದಲ್ಲ, ಮನುಷ್ಯನ ಜೀವನದಲ್ಲಿ ಮಂದಹಾಸ ತರುವುದೇ ಅಭಿವೃದ್ಧಿ ಎಂದರು. ವಿರೋಧ ಪಕ್ಷದವರಿಗೆ ಕೆಲಸ ಇಲ್ಲ.ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯವರು ನಿರಾಶರಾಗಿ ಹೀಗೆ ಮಾತನಾಡುತ್ತಿ ದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸಿಲ್ಲ ಎಂದರು.

ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ: ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್‌‌ ಕುಮಾರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೆಬ್ಬಾಳ್ಕರ್ ಕಿಡಿಕಾರಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ. ದೇವರ-ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು, ಈಗ ಭಗವಂತನಿಗೆ ಮೋಸ ಮಾಡಿದ್ದಾರೆ. ಮೂರ್ತಿ ಕಂಚಿನದ್ದೋ ಅಥವಾ ಫೈಬರಿನದ್ದೊ ಎಂಬುದು ಜಗಜ್ಜಾಹಿರಾಗಿದೆ. ಬಿಜೆಪಿಗೆ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಕರಗತವಾಗಿದೆ ಎಂದು ಲೇವಡಿ ಮಾಡಿದರು.

ಬೊಮ್ಮಾಯಿ ಕ್ಯಾಬಿನೆಟ್ ತೀರ್ಮಾನ: ಈಗಲಾದರೂ ಉಡುಪಿ ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕು. ಇವರು ದೇವರನ್ನೇ ಬಿಡ್ಲಿಲ್ಲ. ಇನ್ನು ಮನುಷ್ಯರು ಯಾವ ಲೆಕ್ಕ?. ಬಿಜೆಪಿ ಆಡಳಿತದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಗೋಮಾಳದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆ ಮಾಡಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸಚಿವೆ ಬಹಿರಂಗ ಪಡಿಸಿದರು.

ಆ ಪರಶುರಾಮ ಮೂರ್ತಿ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಮೂರ್ತಿಯನ್ನು ಪೂರ್ಣ ಗೊಳಿಸುವುದು ನಮ್ಮ ಉದ್ದೇಶ ಎಂದು ಸಿಎಂ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.

ಬೈಂದೂರು ಶಾಸಕರ ವಿರುದ್ಧ ಅಸಮಾಧಾನ: ಬೈಂದೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಹಕ್ಕುಚ್ಯುತಿ ಎಂದರೇನು ಎಂದು ಎರಡು ಬಾರಿ ಶಾಸಕಿಯಾದ ನನಗೂ ಗೊತ್ತು. ಅಧಿಕಾರದ ಲಾಭ ದುರ್ಲಾಭದ ಬಗ್ಗೆ ನನಗೂ ಸಾಮಾನ್ಯ ಜ್ಞಾನ ಇದೆ. ಯಾರ ಹಕ್ಕನ್ನ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಅಧಿಕಾರಿಗಳ ಸಭೆ ಎಲ್ಲಿ ಕರೀಬೇಕು, ಅಲ್ಲಿಯೇ ಕರೆಯಬೇಕು. ಏನೂ ತೊಂದರೆ ಆಗಲ್ಲ. ತನ್ನ ಖಾಸಗಿ ಸ್ಥಳದಲ್ಲಿ ಅಧಿಕಾರಿ ಗಳನ್ನು ಸಭೆಗೆ ಕರೆದರೆ ತೊಂದರೆಯಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಯಲ್ಲಿ ಆಗುವುದೇ ಒಂದು ಪ್ರೊಟೋಕಾಲ್ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೋಮೇಶ್ವರ ಬೀಚ್ ಕಾಮಗಾರಿ ವಿಳಂಬ: ಮರವಂತೆ - ಸೋಮೇಶ್ವರ ಬೀಚ್ ಬಂದರು ಕಾಮಗಾರಿ ವಿಳಂಬವಾಗಿ ರುವುದು ನನ್ನ ಗಮನಕ್ಕೆ ಬಂದಿದ್ದು, ಈ ಸಂಬಂಧ ಗುತ್ತಿಗೆದಾರ ಬಿರಾದಾರ್ ಜೊತೆ ಮಾತನಾಡಿದ್ದೇನೆ. ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ. ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ.ಕಡಲು ಕೊರೆತ ಕಾಮಗಾರಿಗೆ ಶೀಘ್ರವೇ 5ರಿಂದ10 ಕೋಟಿ ರೂ. ಬರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಸಿಎಂ ಹುಲಿ ಇದ್ದಂತೆ

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ದಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ಬುಲೆಟ್ ಪ್ರೂಫ್ ತೆಗೆದಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕರ್ನಾಟಕ ರಾಜ್ಯ ಶಾಂತಿ ಪ್ರಿಯ ವಾಗಿದೆ. ಕರ್ನಾಟಕ ರಾಜ್ಯದಲ್ಲಿ ಬುಲೆಟ್ ಪ್ರೂಫ್ ಬೇಕಾ?. ನಮ್ಮ ಸಿದ್ದರಾಮಯ್ಯನವರು ಯಾವತ್ತೂ ಸ್ಟ್ರಾಂಗ್. ಅದರಲ್ಲಿ ಎರಡು ಮಾತಿಲ್ಲ ಸಿದ್ದರಾಮಯ್ಯ ಅವರಿಗೆ ಹುಲಿ ಎಂದು ಹೆಸರು ಬಂದಿರುವುದು ಇದಕ್ಕೆ ಎಂದರು.

ಟೋಲ್‌ಗೇಟ್ ಸಮಸ್ಯೆಗೆ ಶೀಘ್ರ ಪರಿಹಾರ

ಕಂಚಿನಡ್ಕ ಬಳಿ ಟೋಲ್‌ಗೇಟ್‌ಗೆ ಜನ ವಿರೋಧವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು, ನಾಲ್ಕು ಕಿಲೋಮೀಟರ್‌ನಲ್ಲಿ ಎರಡು ಟೋಲ್ ಗೇಟ್ ಬಂದಿರುವುದು ಬಹಳ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುವೆ. ಅಲ್ಲಿರುವ ಸಮಸ್ಯೆ ಏನು ಎಂದು ನೋಡುತ್ತೇನೆ. ಎರಡು ಕಡೆ ಸುಂಕ ಕೊಡುವುದು ಜನರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.

ಉಸ್ತುವಾರಿ ಬದಲಾವಣೆ ಬಿಜೆಪಿಗಷ್ಟೇ ಬೇಕಾಗಿದೆ

ಜಿಲ್ಲೆಯ ಕುರಿತಂತೆ ಆಸಕ್ತಿಯನ್ನು ತೋರದ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಬಿಜೆಪಿ ಒತ್ತಾಯಿಸಿದ ಕುರಿತು ಹೆಬ್ಬಾಳ್ಕರ್‌ರನ್ನು ಪ್ರಶ್ನಿಸಿದಾಗ, ನನಗೆ ತಿಳಿದಂತೆ ನಮ್ಮ ಜಿಲ್ಲೆಯ ಜನ ಇದನ್ನು ಬಯಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ಪತ್ರಕರ್ತರು ಬಯಸುತ್ತಿಲ್ಲ. ಬಿಜೆಪಿಗರು ಬಯಸಿದರೆ ಜಿಲ್ಲಾ ಉಸ್ತುವಾರಿ ಬದಲಾಗಲು ಸಾಧ್ಯವಿಲ್ಲ ಎಂದರು.

ಬಿಜೆಪಿಗರು ಮುಖ್ಯಮಂತ್ರಿಯನ್ನು ಬದಲು ಮಾಡುವ ತಯಾರಿಯಲ್ಲಿ ದ್ದಾರೆ ಎಂದು ವ್ಯಂಗ್ಯವಾಡಿದ ಸಚಿವೆ, ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.

ನಾನು ಬಹಳ ಬಾರಿ ಉಡುಪಿಗೆ ಬಂದಿದ್ದೇನೆ. ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ, ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪಕ್ಷಾತೀತವಾಗಿ, ರಾಜಕಾರಣ ಮಾಡದೆ ಸರ್ಕಾರಿ ಯೋಜನೆ ಅನುಷ್ಠಾನ ಮಾಡುಲಾಗುತ್ತಿದೆ ಎಂದು ಅವರು ಹೇಳಿದರು.

ಎಲ್ಲಿಯವರೆಗೆ ಮುಖ್ಯಮಂತ್ರಿ,ಹೈಕಮಾಂಡ್ ಆಶೀರ್ವಾದ ಇರುತ್ತದೋ, ಉಡುಪಿ ಶ್ರೀ ಕೃಷ್ಣನ ಆಶೀರ್ವಾದ ಇರುವವರೆಗೆ ನಾನು ಉಸ್ತುವಾರಿ ಸಚಿವೆ ಸ್ಥಾನದಲ್ಲಿ ಇರುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News