ತುಕ್ಕು ಹಿಡಿದ ಇಂದ್ರಾಳಿ ರೈಲ್ವೆ ಸೇತುವೆ ಕಂಬಿಗಳು: ಸ್ವಚ್ಛಗೊಳಿಸುವ ಮೂಲಕ ವಿಶಿಷ್ಟ ಪ್ರತಿಭಟನೆ
ಉಡುಪಿ, ಅ.2: ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಪರಿಣಾಮ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯ ಕಬ್ಬಿಣ ಕಂಬಿಗಳು ತುಕ್ಕು ಹಿಡಿದಿದ್ದು, ಇವುಗಳನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸ್ವಚ್ಛಗೊಳಿಸುವ ಮೂಲಕ ಇಂದು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಲಾಯಿತು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಅರ್ಧಕ್ಕೆ ನಿಂತ ಸೇತುವೆಯ ಪರಿಸರವನ್ನು ಸ್ವಚ್ಚಗೊಳಿಸಿ, ತುಕ್ಕು ಹಿಡಿದ ಕಬ್ಬಿಣದ ಕಂಬಿಗಳಿಗೆ ಬಣ್ಣ ಬಳಿದರು. ಈ ಸಂದರ್ಭದಲ್ಲಿ ಚಿಟ್ಪಾಡಿ ಪದ್ಮನಾಭ ನಗರದ ಆನಂದ ನೇತೃತ್ವದ ತಂಡ ಡೋಲು ಬಾರಿಸಿ ಪ್ರತಿಭಟನೆಗೆ ಸಾಥ್ ನೀಡಿತು.
ಬಳಿಕ ಮಾತನಾಡಿದ ನಿತ್ಯಾನಂದ ಒಳಕಾಡು, ರೈಲ್ವೆ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು ಐದು ವರ್ಷಗಳೇ ಕಳೆದಿವೆ. ಇಲ್ಲಿ ಹಾಕಿರುವ ಕಬ್ಬಿಣದ ಕಂಬಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಸಾಕಷ್ಟು ಅಪಘಾತಗಳು ನಡೆದಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ, ನಿತಿನ್ ಗಡ್ಕರಿ, ರೈಲ್ವೆ ಸಚಿವರು ಉಡುಪಿಯನ್ನು ಕಡೆಗಣಿಸುತ್ತಿದ್ದಾರೆ. ಉಡುಪಿ ಜನರು ಮೂರ್ಖರೆಂದು ತಿಳಿಯಬೇಡಿ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಿ. ಆ ನಿಟ್ಟಿನಲ್ಲಿ ಈ ಸ್ವಚ್ಚತಾ ಪ್ರತಿಭಟನಾ ಅಭಿಯಾನವನ್ನು ಹಮ್ಮಿಕೊಂಡು, ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದೇವೆ ಎಂದರು.