ಮಗಳು ಪ್ರವೀಣ್‌ನಿಂದ ಹಣ ಕೊಟ್ಟು ಸ್ಕೂಟರ್ ಖರೀಸಿದ್ದಳು: ನೂರ್ ಮುಹಮ್ಮದ್
ಉಡುಪಿ, ನ.26: ‘ನನ್ನ ಮಗಳು ಮಂಗಳೂರಿನಲ್ಲಿ ವಾಸವಾಗಿದ್ದ ಫ್ಲ್ಯಾಟ್ ನಿಂದ ಪೊಲೀಸರು ವಶಪಡಿಸಿಕೊಂಡ ಆರೋಪಿ ಪ್ರವೀಣ್ ಚೌಗುಲೆಯ ಸ್ಕೂಟರ್‌ನ್ನು ಆಕೆ 28 ಸಾವಿರ ರೂ. ನೀಡಿಯೇ ಆತನಿಂದ ಖರೀದಿಸಿದ್ದಳು’ ಎಂದು ಕೊಲೆಗೀಡಾದ ಗಗನಸಖಿ ನೇಜಾರಿನ ಐನಾಝ್ ಅವರ ತಂದೆ ನೂರ್ ಮುಹಮ್ಮದ್ ಸ್ಪಷ್ಟಪಡಿಸಿದ್ದಾರೆ.
ನೇಜಾರಿನ ಮನೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹೊಸ ಕಾರು ಖರೀದಿಸಿದ ನಂತರ ತನ್ನಲ್ಲಿದ್ದ ಸ್ಕೂಟರ್‌ನ್ನು ಖರೀದಿಸುವಂತೆ ನನ್ನ ಮಗಳಲ್ಲಿ ಕೇಳಿಕೊಂಡಿದ್ದನು. ಅದರಂತೆ ಐನಾಝ್, ಸ್ಥಳೀಯ ವಾಗಿ ಬಳಸಲು ಮತ್ತು ಅಫ್ನಾನ್‌ಗೆ ಕಾಲೇಜಿಗೆ ಹೊಗಲು ಅನುಕೂಲವಾಗುವ ನಿಟ್ಟಿನಲ್ಲಿ ಆತನಿಂದ ಸ್ಕೂಟರ್ ಖರೀದಿಸಿದ್ದಳು. ಅದಕ್ಕೆ ಆಕೆ ಆತನಿಗೆ 28 ಸಾವಿರ ರೂ. ನೀಡಿದ್ದಳು. ಇದನ್ನು ಆಕೆ ನನ್ನ ಜೊತೆ ಹೇಳಿಕೊಂಡಿದ್ದಳು.
ಅಚ್ಚುಕಟ್ಟು ರೂಮ್: ಶನಿವಾರ ಸಂಜೆ ವೇಳೆ ನನ್ನ ಮಕ್ಕಳು ಮಂಗಳೂರಿನ ಕುಂಟಿಕಾನದಲ್ಲಿದ್ದ ಬಾಡಿಗೆ ಫ್ಲ್ಯಾಟ್‌ಗೆ ಹೋಗಿದ್ದೆ. ನಾನು ಬರುವ ವಿಚಾರ ತಿಳಿದು ಆ ವಸತಿ ಸಮುಚ್ಛಯದ ನಾಲ್ಲೈದು ಕುಟುಂಬಗಳು ನಮಗಾಗಿ ಕಾಯುತ್ತಿದ್ದವು. ನನ್ನ ಮಗಳೆಂದರೆ ಅವರಿಗೆ ತುಂಬಾ ಪ್ರೀತಿ. ಅವರೆಲ್ಲ ನನ್ನನ್ನು ನೋಡಿ ಕಣ್ಣೀರಿಟ್ಟರು. ಅಫ್ನಾನ್ ಜೊತೆ ಲಾಜಿಸ್ಟಿಕ್‌ಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಯೊಬ್ಬಳು ಕೂಡ ಆಕೆಯನ್ನು ನೆನೆದು ಅತ್ತಳು ಎಂದು ಅವರು ಹೇಳಿದರು.
ನನ್ನ ಮಕ್ಕಳು ಅವರ ರೂಮನ್ನು ತುಂಬಾ ಅಚ್ಚುಕಟ್ಟಾಗಿ ಇಟ್ಟಿದ್ದರು. ಕೊನೆಯದಾಗಿ ಅವರು ನಮಾಝ್ ಮಾಡಿರುವುದು ಕೂಡ ಅಲ್ಲಿ ಕಂಡು ಬಂದಿದೆ. ಅವರು ಹಾಕಿದ್ದ ನಮಾಝ್‌ನ ವಸ್ತ್ರ, ಅದರಲ್ಲಿ ತಬ್ಸಿ, ಅಲ್ಲೇ ಪಕ್ಕದಲ್ಲಿ ಕುರಾನ್ ಎಲ್ಲವೂ ಇತ್ತು. ಅವರು ಅಲ್ಲೇ ಊಟ ಸಿದ್ಧಪಡಿಸಿ ತಿನ್ನುತ್ತಿದ್ದರು. ಕೋಣೆಯಲ್ಲಿದ್ದ ಮಕ್ಕಳ ಫೋಟೋ ನೋಡುವಾಗ ನನಗೆ ಕಣ್ಣಲ್ಲಿ ನೀರು ಬಂತು ಎಂದು ಅವರು ನೋವಿನಿಂದ ಹೇಳಿಕೊಂಡರು.
ಡೈರಿ ಬರೆಯುತ್ತಿದ್ದಳು: ಐನಾಝ್, ತಾನು ಪ್ರಯಾಣ ಮಾಡಿರುವ ವಿಚಾರ, ಹೋದ ದೇಶಗಳ ಬಗ್ಗೆ ಡೈರಿಯಲ್ಲಿ ಬರೆದಿಟ್ಟಿದ್ದಾಳೆ. ತನ್ನ ಜೊತೆ ಕೆಲಸ ಮಾಡುವ ಕಾರಣಕ್ಕಾಗಿ ಆಕೆ ರೂಮ್ ಹುಡುಕುವಾಗ ಪ್ರವೀಣ್‌ನ ಸಹಾಯ ಪಡೆದು ಕೊಂಡಿದ್ದಳು ಎಂದು ಅವರು ಹೇಳಿದರು.
ರೂಮ್ ಮಾಲಕ ಹೇಳಿದ ಪ್ರಕಾರ ಆತ ಅಲ್ಲಿಗೆ ಒಂದೇ ಬಾರಿ ಬಂದಿದ್ದನು. ಮಕ್ಕಳೇ ತಮ್ಮ ಆಧಾರ್ ಕಾರ್ಡ್, ಠೇವಣಿ ಹಣ ಕೊಟ್ಟು ರೂಮ್ ಬಾಡಿಗೆ ಪಡೆದುಕೊಂಡಿದ್ದರು. ನಾನು ಕಳುಹಿಸಿದ ಹಣದಿಂದ ಹೊಸದಾಗಿ ಖರೀದಿಸಿದ ಬಟ್ಟೆ, ಫ್ರಿಡ್ಜ್, ವಾಶಿಂಗ್ ಮೆಶಿನ್ ಎಲ್ಲವೂ ಅಲ್ಲಿ ಇತ್ತು ಎಂದು ನೂರ್ ಮುಹಮ್ಮದ್ ತಿಳಿಸಿದರು.