ಮುಂಬೈ ಮಾದರಿಯಲ್ಲಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

Update: 2023-10-16 13:10 GMT

ಉಡುಪಿ, ಅ.16: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರಕಾರವನ್ನು ಒತ್ತಾಯಿಸುವುದರ ಜೊತೆಗೆ ಮುಂಬೈ ಮಾದರಿ ಯಲ್ಲಿ ಕಡಲು ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಲಾಗು ವುದು ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಡಿ.ಆರ್.ರಾಜು ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾಲೀನ್ಯ ರಹಿತ ಅಭಿವೃದ್ಧಿಗಾಗಿ ಸಮಿತಿಯು ಮುಂದೆಯೂ ಸಾಕಷ್ಟು ಶ್ರಮ ವಹಿಸಲಿದೆ. ಸಮುದ್ರ ಕೊರೆತದಿಂದಾಗಿ ಅಪಾರ ಪ್ರಮಾಣದ ಕಷ್ಟ ನಷ್ಟಗಳು ಮಾತ್ರವಲ್ಲದೆ ತೀರ ಹಾನಿ ಉಂಟಾಗುತ್ತಿದ್ದು ಸಮುದ್ರ ತೀರದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವುದು ಅತೀ ಅಗತ್ಯ ಎಂದರು.

ಕರಾವಳಿಯ ಉಭಯ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಸೇರಿದಂತೆ ಮಂಗಳೂರಿನಲ್ಲಿ ಒಂದೇ ವಿಮಾನ ನಿಲ್ದಾಣವಿದ್ದು ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಕೇಂದ್ರೀಕತಗೊಳಿಸಿ ಈ ಭಾಗದಲ್ಲಿ ಒಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಮಿತಿಯ ಸಂಸ್ಥಾಪಕ ತೋನ್ಸೆ ಜಯ ಕೃಷ್ಣ ಎ.ಶೆಟ್ಟಿ ಮಾತನಾಡಿ, ಸಮಿತಿಯು ಕುದುರೆಮುಖ ಯೊಜನೆ, ನಾಗಾರ್ಜುನ ಪವರ್ ಪ್ರಾಜೆಕ್ಟ್ ಸೇರಿದಂತೆ ಕರಾವಳಿ ಅಭಿವೃದ್ಧಿಗಾಗಿ, ಮಾಲಿನ್ಯ ರಹಿತ ಉದ್ಯಮ ಸ್ಥಾಪನೆಯೊಂದಿಗೆ ಉದ್ಯೋಗಾ ವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ನಡೆಸಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯು ವಿಕೆ ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮಾರ್ಪಡಿಸುವಲ್ಲಿ ಸಮಿತಿಯ ಶ್ರಮ ಅಪಾರವಾಗಿದೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ, ಮರಗಳ ಉಳಿಯುವುಕೆ, ಪ್ರತಿ ಗ್ರಾಮದಲ್ಲೂ ವಿದ್ಯುತ್ ಚಿತಗಾರ ನಿರ್ಮಾಣ, ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ-ಮರಗಳ ನೆಡುವುದು, ಉಭಯ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸಮಿತಿಯ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಏರ್ ಇಂಡಿಯಾದ ಸ್ಟೇಷನ್ ಪ್ರಬಂಧಕ ನಾಗೇಶ್ ಶೆಟ್ಟಿ ಮಾಣಿಗುತ್ತು, ಸಮಿತಿಯ ಗೌರವ ಕಾರ್ಯದರ್ಶಿ ರವಿ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ.ಶಂಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News