ಮುಸ್ಲಿಮ್ ಧರ್ಮದ ವಿರುದ್ಧ ಅವಹೇಳನಕಾರಿ ಟ್ವೀಟ್: ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ

Update: 2024-08-14 15:02 GMT

ಉಡುಪಿ, ಆ.14: ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಕಾಮೆಂಟ್ ಮಾಡಿರುವ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕೀರ್ತನ್ ಉಪಾಧ್ಯ ಪ್ರಕರಣದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಹಾಗೂ ಮಣಿಪಾಲ ನಿವಾಸಿಯಾಗಿರುವ ಡಾ.ಉಪಾಧ್ಯ ‘ಲಾನ್ಲಿ ಸ್ಟ್ರೇಂಜರ್’ ಎಂಬ ಹೆಸರಿನ ಎಕ್ಸ್ ಖಾತೆಯನ್ನು ಹೊಂದಿದ್ದು, ಜು.13ರಂದು ಎಕ್ಸ್‌ನಲ್ಲಿ ಅಭಿ ಆ್ಯಂಡ್ ನೀಯು ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವು ದಾದರೆ ಅದು ಯಾವುದು?’ ಎಂಬ ಪ್ರಶ್ನೆಗೆ ‘ಮುಸ್ಲಿಂ ಕಮ್ಯುನಿಟಿ’ ಎಂದು ಡಾ.ಉಪಾಧ್ಯ ಪ್ರಚೋದನಕಾರಿಯಾಗಿ ಉತ್ತರಿಸಿದ್ದರು.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದದ ಸೃಷ್ಠಿಸಿತ್ತು. ಈ ಮೂಲಕ ವೈದ್ಯರ ನಡೆ ವಿರುದ್ಧ ಬಹಳಷ್ಟು ಆಕ್ರೋಶ ವ್ಯಕ್ತ ವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಯತ್ನಿಸಿದ ಆರೋಪದಡಿ ವೈದ್ಯನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.

ಬಳಿಕ ತಲೆಮರೆಸಿಕೊಂಡಿದ್ದ ವೈದ್ಯ ಡಾ.ಉಪಾಧ್ಯ, ಉಡುಪಿ ನ್ಯಾಯಾಲಯ ದಲ್ಲಿ ಜಾಮೀನು ಪಡೆದುಕೊಂಡಿದ್ದರು. ಮುಂದೆ ಆರೋಪಿಯು, ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದು, ಅದರಂತೆ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ನಾಗಪ್ರಸನ್ನ, ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಎಫ್‌ಐಆರ್‌ಗೆ ಆ.1ರಂದು ತಡೆಯಾಜ್ಞೆ ನೀಡಿ ಆದೇಶ ನೀಡಿದರು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News