ಪಿಪಿಪಿ ಯೋಜನೆಯಡಿ ಕರಾವಳಿ ಬೀಚ್‌ಗಳ ಅಭಿವೃದ್ಧಿಗೆ ಚಿಂತನೆ: ಸಚಿವ ಎಚ್.ಕೆ. ಪಾಟೀಲ್

Update: 2024-01-14 13:59 GMT

ಕುಂದಾಪುರ: ಕರಾವಳಿ ಕರ್ನಾಟಕದಲ್ಲಿ 320 ಕೀ.ಮೀ. ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫಲವಾದ ಅವಕಾಶಗಳಿವೆ. ಇಲ್ಲಿನ ಬೀಚ್‌ಗಳ ಅಭಿವೃದ್ದಿ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ಮಾಡುತ್ತಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ ಮಾದರಿ)ದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಕೋಡಿಗೆ ಆಗಮಿಸಿದ ವೇಳೆ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಯಾವುದೇ ಸರಕಾರ ಬೀಚ್‌ಗಳ ಅಭಿವೃದ್ಧಿಗೆ ಸರಿಯಾದ ಒತ್ತು ನೀಡಿಲ್ಲ. ಇದೀಗ ನಾವು ಸಾಹಸಿ ವಾಟರ್ ಸ್ಪೋರ್ಟ್ಸ್ ಸೇರಿದಂತೆ ಬೀಚ್‌ಗಳ ಅಭಿವೃದ್ಧಿ ಕುರಿತು ಅಧ್ಯಯನ ಆರಂಭಿಸಿದ್ದೇವೆ. ಈ ಸಂಬಂಧ ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ತಜ್ಞರ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಮುಂದಿನ ಮಾರ್ಚ್ ಅಥವಾ ಎಪ್ರಿಲ್ ತಿಂಗಳೊಳಗೆ ಮೂರು ಹಂತಗಳಲ್ಲಿ ಕರಾವಳಿ ಕರ್ನಾಟಕದ 320 ಕಿ.ಮೀ. ವ್ಯಾಪ್ತಿಯ ಬೀಚ್‌ಗಳ ಅಭಿವೃದ್ಧಿಗಾಗಿ ಯೋಜನೆ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಈ ಬಗ್ಗೆ ಎರಡು 2-3 ತಿಂಗಳೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಭೆಯಲ್ಲಿ ಇದರ ಸ್ವರೂಪ ಗುರುತಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಅವರು ಹೇಳಿದರು.

ಕೋಡಿ ಬೀಚ್‌ಗೆ ಮೊಟ್ಟೆ ಇಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಗಾಯಾಳು ಕಡಲಾಮೆಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕೇಂದ್ರ ಸ್ಥಾಪಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮಾಹಿತಿ ನನಗೆ ಮೊದಲ ಬಾರಿಗೆ ಗಮನಕ್ಕೆ ಬಂದಿದೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಅಗತ್ಯ ಇದ್ದರೆ ಪಶುಸಂಗೋಪನ ಇಲಾಖೆಯ ಅಧಿಕಾರಿಗಳನ್ನು ಕರೆದು ಮಾತುಕತೆ ನಡೆಸುತ್ತೇನೆ. ಇದರ ಮೊದಲ ಹಂತದ ಚರ್ಚೆಯನ್ನು ಆದಷ್ಟು ಬೇಗ ಮಾಡುತ್ತೇವೆ ಎಂದರು.

ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಪ್ರಚೋದನಕಾರಿ ಹೇಳಿಕೆ ಕುರಿತು ಪ್ರತ್ರಿಯಿಸಿದ ಸಚಿವರು, ಏಕವಚನದ ಮಾತು, ಜನರನ್ನು ಪ್ರಚೋದನೆ ಮಾಡುವ ಹೇಳಿಕೆ, ಅವಮಾನ ಮಾಡುವ ವಿಚಾರಗಳು ಆ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News