ರಾಜಭವನವನ್ನು ರಾಜಕೀಯ ಭವನ ಮಾಡಬೇಡಿ: ಮಂಜುನಾಥ ಭಂಡಾರಿ

Update: 2024-08-19 15:50 GMT

ಉಡುಪಿ: ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರ ಬಗ್ಗೆ ಲೋಕಾಯುಕ್ತ ಸಲ್ಲಿಸಿದ ವರದಿಯನ್ನು ತಿಂಗಳುಗಳಿಂದ ಬದಿಗಿರಿಸಿದ ರಾಜ್ಯಪಾಲರು ಸಿದ್ಧರಾಮಯ್ಯ ವಿರುದ್ಧ ಬಂದ ಖಾಸಗಿ ದೂರಿನ ಬಗ್ಗೆ 24 ಗಂಟೆಯೊಳಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಕೆಪಿಸಿಸಿಯ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಬ್ರಹ್ಮಗಿರಿಯಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನೆಯ ಬಳಿಕ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ರಾಜ್ಯಪಾಲರ ಹುದ್ದೆಯ ಘನತೆ ಹಾಗೂ ರಾಜಭವನದ ಗೌರವವನ್ನು ಕಾಪಾಡುವಂತೆ ಸಲಹೆ ನೀಡಿದ ಮಂಜುನಾಥ ಭಂಡಾರಿ, ರಾಜಭವನವನ್ನು ರಾಜಕೀಯ ಭವನವನ್ನಾಗಿ ಮಾಡಬೇಡಿ ಎಂದರು. ರಾಜ್ಯಪಾಲರಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಿ ಎಂದು ಮನವಿ ಮಾಡಿದರು.

ಬಿಜೆಪಿಯ ಒತ್ತಡಕ್ಕೆ ಮಣಿದು ರಾಜಕಾರಣಿಯಂತೆ ಆಡಬೇಡಿ. ರಾಜಕಾರಣಿಯಾಗಲೇ ಬೇಕೆಂದಿದ್ದರೆ, ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ರಾಜಕೀಯ ಮಾಡಿ ಎಂದು ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ರೆಡ್ಡಿಯವರ ವಿರುದ್ಧದ ಲೋಕಾಯುಕ್ತ ವರದಿ ಬಾಕಿ ಇರುವಾಗ ರಾಜ್ಯಪಾಲರು ಸಿದ್ಧರಾಮಯ್ಯ ವಿರುದ್ಧ ಖಾಸಗಿ ದೂರಿಗೆ ಹೇಗೆ ತರಾತುರಿಯಿಂದ ಅನುಮತಿ ನೀಡಿದರು ಎಂದು ಪ್ರಶ್ನಿಸಿದರು.

ನಾಲ್ಕು ದಶಕಗಳಿಂದ ಪರಿಶುದ್ಧ ರಾಜಕಾರಣ ಮಾಡಿಕೊಂಡು ಬಂದ ಸಿದ್ಧರಾಮಯ್ಯ ಗ್ಯಾರಂಟಿ ಮೂಲಕ ಪಡೆದ ಜನಪ್ರಿಯತೆ, ಜನಮನ್ನಣೆ ಯನ್ನು ಸಹಿಸದೇ, ಅವರ ಮೇಲೆ ಕಪ್ಪುಚುಕ್ಕಿ ಹಾಕಲು ಬಿಜೆಪಿ ಮಾಡಿದ ಈ ಪ್ರಯತ್ನ ಖಂಡಿತ ಯಶಸ್ವಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟದ ಜೊತೆಜೊತೆಗೆ ರಾಜಕೀಯ ಹೋರಾಟವನ್ನು ರಾಜ್ಯಾದ್ಯಂತ ನಡೆಸಲಿದೆ. ತನ್ನ ಮೇಲೆ ಭ್ರಷ್ಚಾಚಾರದ ಕೇಸು ಇದ್ದು, ತನಿಖೆ ಎದುರಿಸುತ್ತಿರುವ ಜಿಲ್ಲೆಯ ಬಿಜೆಪಿ ಮಾಜಿ ಸಚಿವರೊಬ್ಬರು ನೈತಿಕತೆ ಇದ್ದರೆ ರಾಜಿನಾಮೆ ನೀಡುವಂತೆ ಸಿದ್ಧರಾಮಯ್ಯರನ್ನು ಹೇಗೆ ಒತ್ತಾಯಿಸುತ್ತಾರೆ ಎಂಬುದೇ ಆಶ್ಚರ್ಯ ಎಂದು ಹೆಗ್ಡೆ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯಕುಮಾರ್ ಶೆಟ್ಟಿ ಮುನಿಯಾಲು, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಪ್ರಖ್ಯಾತ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News