ವಿವಿ, ಕಾಲೇಜುಗಳಲ್ಲಿ ಕೌಶಲ್ಯ ಸೆಂಟರ್‌ಗಳ ಸ್ಥಾಪನೆ: ಸಚಿವ ರಾಜೀವ್ ಚಂದ್ರಶೇಖರ್
ಮಣಿಪಾಲ, ಅ.17: ಒಂದು ವರ್ಷದಲ್ಲಿ 65 ಲಕ್ಷದಿಂದ ಒಂದು ಕೋಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವ ಪಿಎಂಕೆಇವೈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಾಲೇಜುಗಳಲ್ಲಿ ಕೌಶಲ್ಯ ಸೆಂಟರ್‌ಗಳನ್ನು ಸ್ಥಾಪಿಸುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಕೈಗಾರಿಕೆಗಳ ಸಹಯೋಗದಲ್ಲಿ ಸುಮಾರು 3,400 ವಿವಿಧ ಕೌಶಲ್ಯ ಕೋರ್ಸುಗಳಲ್ಲಿ ತರಬೇತಿ ನೀಡಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಮಣಿಪಾಲದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟೋಮೆಶನ್ ವಾಹನಗಳು, ಕೃತಕ ಬುದ್ದಿಮತ್ತೆ, ಸಿಂಥೆಟಿಕ್ ಬಯೋಲಜಿ ಕ್ಷೇತ್ರಗಳು ಈ ದೇಶದ ಭವಿಷ್ಯದ ಅವಕಾಶಗಳಾಗಿವೆ. 2030ರೊಳಗೆ ಭಾರತದ ಡಿಜಿಟಲ್ ದಶಕ ಆರಂಭವಾಗಲಿದೆ. ರೈತರಿಂದ ಹಿಡಿದು ಚಿಲ್ಲರೆ ವ್ಯಾಪಾರಿಗಳವರೆಗೆ ಎಲ್ಲಾ ಕ್ಷೇತ್ರಗಳಿಗೂ ತಂತ್ರಜ್ಞಾನಗಳು ಪ್ರಮುಖ ವಾಗಿವೆ. ಇಂದು ಭಾರತವು ಅತಿದೊಡ್ಡ ಉದ್ಯೋಗ ಮಾರುಕಟ್ಟೆಯ ನೆಲೆಯಾಗಿದೆ ಎಂದರು.
ಕೆಲವು ರಾಜ್ಯಗಳು ಪ್ರಗತಿಪರ ನಾಯಕತ್ವವನ್ನು ಹೊಂದಿದೆ. ಇನ್ನು ಕೆಲವು ರಾಜ್ಯಗಳು ಕೇವಲ ರಾಜಕೀಯ ಮಾಡುವುದ ರಲ್ಲಿ ನಿರತರಾಗಿದೆ. ಇದರಿಂದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ಕೆಲ ರಾಜ್ಯ ಗಳು ಮಾತ್ರ ಪ್ರಗತಿ ಸಾಧಿಸಿವೆ. ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕದ ಕೆಲ ಭಾಗಗಳಲ್ಲಿ ಮಾತ್ರ ಈ ಸಾಧನೆ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
ಆಡಳಿತದಲ್ಲಿ ಪ್ರಗತಿಪರವಾಗಿ ಹಾಗೂ ಆಧುನಿಕ ತಂತ್ರಜ್ಞಾನಗಳ ಲಾಭ ಪಡೆದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ರಾಜ್ಯಗಳ ಅಭಿವೃದ್ಧಿಗೆ ಆ ರಾಜ್ಯದಲ್ಲಿ ಯಾವ ರೀತಿಯ ನಾಯಕತ್ವ ಇದೆ ಎಂಬುದು ಮುಖ್ಯವಾಗುತ್ತದೆ. ಅವಕಾಶಗಳನ್ನು ಪಡೆಯುವಲ್ಲಿ ಕರ್ನಾಟಕ ರಾಜ್ಯ ಆಕ್ರಮಣಕಾರಿಯಾಗಿಲ್ಲ ಎಂದು ಅವರು ಹೇಳಿದರು.
ಪಿಎಂ ವಿಶ್ವಕರ್ಮ ಯೋಜನೆಯಿಂದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 35,000 ಕೋಟಿ ರೂ. ಘೋಷಣೆ ಮಾಡಲಾಗಿದೆ. ಆಧುನಿಕ ಕೌಶಲ್ಯಗಳಿಂದ ಹೊಸ ಮಾರುಕಟ್ಟೆ ನಿರ್ಮಾಣ ವಾಗಲಿದೆ. ಡಿಜಿಟಲ್ ಸೌಲಭ್ಯ ಪಡೆಸಿಕೊಂಡು ಕೌಶಲ್ಯ ಅಭಿವೃದ್ದಿ ಮಾಡಿದರೆ ಮಾತ್ರ ಭವಿಷ್ಯ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.
‘1ಲಕ್ಷ ಕೋಟಿಯಷ್ಟು ಮೊಬೈಲ್‌ಗಳು ರಫ್ತು’
ಭಾರತವು ಅಭಿವೃದ್ಧಿಯ ಕ್ಷಿಪ್ರ ಹಂತದಲ್ಲಿದೆ. 10 ವರ್ಷಗಳ ಹಿಂದೆ, ಭಾರತವು ಭಾರತದಲ್ಲಿ ಬಳಸುವ ಶೇ.82ರಷ್ಟು ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಂಡಿತ್ತು, ಆದರೆ 2022ರ ವೇಳೆಗೆ ಭಾರತವು ಭಾರತದಲ್ಲಿ ಬಳಸುವ ಶೇ.100ರಷ್ಟು ಮೊಬೈಲ್ ಫೋನ್‌ಗಳನ್ನು ಇಲ್ಲೇ ಉತ್ಪಾದಿಸುತ್ತಿವೆ. ಸುಮಾರು ಒಂದು ಲಕ್ಷ ಕೋಟಿಯಷ್ಟು ಮೊಬೈಲ್ ಫೋನ್‌ಗಳು ರಫ್ತಾಗುತ್ತವೆ ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಹೇಳಿದರು.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಎಂಐಟಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನದ ಉತ್ಸವ ‘ಟೆಕ್ ತತ್ತ್ವ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
2014ರಲ್ಲಿ ಡಿಜಿಟಲ್ ಆರ್ಥಿಕತೆಯು ಒಟ್ಟಾರೆ ಜಿಡಿಪಿಯ ಶೇ.4.5 ಹೊಂದಿದೆ. ಆ ಅಂಕಿ ಅಂಶದ ಬಹುಪಾಲು ಐಟಿ ಕ್ಷೇತ್ರಗಳಾಗಿವೆ. ಇದು 2023ರ ವೇಳೆಗೆ ಒಟ್ಟು ಜಿಡಿಪಿಯ ಶೇ.11.5ಕ್ಕೆ ಮತ್ತು 2026ರ ವೇಳೆಗೆ ಶೇ.26 ಕ್ಕೆ ಏರಿಕೆಯಾ ಗುವ ನಿರೀಕ್ಷೆ ಇದೆ. ಡಿಜಿಟಲ್ ಆರ್ಥಿಕತೆಯ ಪ್ರತಿಯೊಂದು ವಿಭಾಗವು ಈಗ ಉತ್ಕೃಷ್ಟತೆಯನ್ನು ಕಾಣುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮಾಹೆ ಪ್ರೊಚಾನ್ಸೆಲರ್ ಡಾ.ಎಚ್. ಎಸ್.ಬಲ್ಲಾಳ್, ವೈಸ್ ಚಾನ್ಸಲರ್ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸೆಲರ್ ಡಾ. ನಾರಾಯಣ ಸಭಾಹಿತ್, ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ಮೊದಲಾದವರು ಉಪಸ್ಥಿತರಿದ್ದರು.