ಆ.27ರಂದು ಉಡುಪಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನ; ಡಾ.ಗಣನಾಥ ಎಕ್ಕಾರು ಸಮ್ಮೇಳನಾಧ್ಯಕ್ಷ

Update: 2024-08-24 15:01 GMT

ಉಡುಪಿ, ಆ.24: ಪರ್ಯಾಯ ಶ್ರೀಪುತ್ತಿಗೆ ಮಠ, ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಉಡುಪಿ ತಾಲೂಕು ಘಟಕಗಳ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಆ.27ರಂದು ಉಡುಪಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಆಯೋಜಿಸಿದೆ ಎಂದು ಪರಿಷತ್‌ನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.27ರ ಮಂಗಳವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 8:30ರಿದ ಅಪರಾಹ್ನ 2:30ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಥಮ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಜಾನಪದ ವಿದ್ವಾಂಸ ಹಾಗೂ ಸಂಸ್ಕೃತಿ ಚಿಂತಕ ಡಾ.ಗಣನಾಥ ಎಕ್ಕಾರು ಆಯ್ಕೆ ಮಾಡಲಾಗಿದೆ ಎಂದ ಗಣೇಶ ಗಂಗೊಳ್ಳಿ, ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅರು ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ರಾದ ಡಾ.ಜಾನಪದ ಎಸ್.ಬಾಲಾಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೋಟದ ಆನಂದ ಸಿ.ಕುಂದರ್, ಮಾಜಿ ಶಾಸಕ ಕೆ.ರಘುಪತಿ ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪಾಲ್ಗೊಳ್ಳುವರು ಎಂದರು.

ರಾಜ್ಯ ಜಾನಪದ ಪ್ರಶಸ್ತಿ: ಸಮ್ಮೇಳನದಲ್ಲಿ ಹಿರಿಯ ತುಳು ಪಾಡ್ದನ ಕಲಾವಿದೆ ಮೂಡುಬೆಳ್ಳೆಯ ಅಪ್ಪಿ ಕೃಷ್ಣ ಪಾಣ, ಕುಂದಾಪುರ ವಾಲ್ತೂರಿನ ಪಾಣರಾಟದ ಹಿರಿಯ ಕಲಾವಿದ ನಾಗರಾಜ್ ಪಾಣ, ಹಿರಿಯ ಜಾನಪದ ಕಲಾವಿದ ಶಂಕರ್‌ ದಾಸ್ ಚೆಂಡ್ಕಳ, ಜಾನಪದ ಸಂಪ್ರದಾಯ ಹಾಡುಗಳ ಕಲಾವಿದೆ ಜಾಹ್ನವಿ ಹೆರ್ಳೆ, ಹೌಂದರಾಯನ ವಾಲ್ಗದ ಕಲಾವಿದ ಸತೀಶ್ ಕಾಂಚನ್, ಹಿರಿಯ ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು ಹಾಗೂ ಜಾನಪದ ಕಲಾವಿದ ಗಣೇಶ ಬಾರ್ಕೂರು ಇವರನ್ನು ತಲಾ 5000ರೂ. ನಗದು ಸೇರಿದಂತೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಸನ್ಮಾನಿಸಲಾ ಗುವುದು ಎಂದು ಅವರು ತಿಳಿಸಿದರು.

ಜಾನಪದ ಗೋಷ್ಠಿ: ಸಮ್ಮೇಳನದಲ್ಲಿ ಎರಡು ಜಾನಪದ ಗೋಷ್ಠಿ ನಡೆಯಲಿದ್ದು, ಜಾನಪದ ಹಾಗೂ ಪ್ರಾಚ್ಯ ಇತಿಹಾಸ ಸಂಶೋಧಕ ಪ್ರೊ. ಎಸ್.ಎ.ಕೃಷ್ಣಯ್ಯ ಅವರು ಬ್ರಹ್ಮಾವರದಿಂದ ಹೆಬ್ರಿ, ಕಾರ್ಕಳ, ಉಡುಪಿ ತಾಲೂಕಿನ ವಿಶಿಷ್ಟ ಜಾನಪದ ಆಚರಣೆ ಕುರಿತು ಹಾಗೂ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಣ ನರೇಂದ್ರ ಕುಮಾರ್ ಕೋಟ ಅವರು ಬ್ರಹ್ಮಾವರದಿಂದ ಬೈಂದೂರು, ಶಿರೂರಿನವರೆಗೆ ಇರುವ ಕುದಾಪುರ ಕನ್ನಡದ ಜಾನಪದ ಸಂಸ್ಕೃತಿ ಕುರಿತು ಗೋಷ್ಠಿ ನಡೆಸಿಕೊಡಲಿದ್ದಾರೆ.

ಹಂಪಿ ಕನ್ನಡ ವಿವಿಯ ಡೀನ್ ಹಾಗೂ ಜನಪದ ವಿಭಾಗದ ಮುಖ್ಯಸ್ಥ ಪ್ರೊ.ಚೆಲುವರಾಜು, ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ಮಾಯಾ ಕಾಮತ್, ಕಾಪು ಚಂದ್ರನಗರದ ಸಂಘಟಕ ಮೊಹಮ್ಮದ್ ಫಾರೂಕ್ ಸೇರಿದಂತೆ ಏಳು ಮಂದಿಯನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಗಣೇಶ ಗಂಗೊಳ್ಳಿ ತಿಳಿಸಿದರು

ಸಮ್ಮೇಳನದಲ್ಲಿ ಕಣ್ಮರೆಯ ಹಂತದಲ್ಲಿರುವ ಅಪರೂಪ ಹೌಂದರಾಯನ ವಾಲ್ಗ, ಕೋಲಾಟ, ಕಂಗೀಲು, ಚೆನ್ನುಕುಣಿತ, ಮಂಗಳವಾದ್ಯ ಮುಂತಾದ ಜಾನಪದ ಗಾನಯಾನ, ನೃತ್ಯವೈಭವ ನಡೆಯಲಿದೆ. ಅಪರಾಹ್ನ 12:30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಜಾನಪದ ಪರಿಷತ್‌ನ ರಾಜ್ಯ ಸಂಚಾಲಕ ಪ್ರೊ.ಕೆ.ಎಸ್.ಕೌಜಲಗಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ, ಮಾಯಾ ಕಾಮತ್, ಪ್ರಶಾಂತ್ ಶಿರೂರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News