ಆರು ವರ್ಷಗಳಲ್ಲೇ ಜರ್ಝರಿತಗೊಂಡ ಗಂಗೊಳ್ಳಿ ಮೀನು ಮಾರುಕಟ್ಟೆ !
-ಯೋಗೀಶ್ ಕುಂಭಾಸಿ
ಕುಂದಾಪುರ, ಆ.8: ಆರು ವರ್ಷಗಳ ಹಿಂದೆ ಸುಸಜ್ಜಿತ ಮೀನು ಮಾರುಕಟ್ಟೆ ಹೆಸರಲ್ಲಿ ಉದ್ಘಾಟನೆಗೊಂಡ ಗಂಗೊಳ್ಳಿ ಮೀನು ಮಾರುಕಟ್ಟೆಯ ಸರಿಯಾದ ನಿರ್ವಹಣೆ ಇಲ್ಲದೆ ಜರ್ಝರಿತಗೊಂಡಿದೆ. ಮೂಲಸೌಕರ್ಯಗಳ ಕೊರತೆ ಯಿಂದ ಮೀನು ಮಾರುವ ಮಹಿಳೆಯರು ಸಹಿತ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಗಂಗೊಳ್ಳಿ ತಾಲೂಕಿನ ಪ್ರಮುಖ ಬಂದರು ಕೇಂದ್ರವಾಗಿದ್ದು, ಇಲ್ಲಿನ ಮೀನು ಮಾರುಕಟ್ಟೆ ಕೂಡ ತಾಜಾ ಮೀನುಗಳಿಗೆ ಪ್ರಸಿದ್ಧಿ ಪಡೆದಿದೆ. ಹಲವು ವರ್ಷಗಳ ಇತಿಹಾಸವಿರುವ ಇಲ್ಲಿನ ಮೀನು ಮಾರುಕಟ್ಟೆಯನ್ನು 2017 ಮಾರ್ಚ್ ತಿಂಗಳಿನಲ್ಲಿ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೀನುಗಾರಿಕೆ ಇಲಾಖೆಯ ಅನುದಾನದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲಾಗಿತ್ತು.
ಸಮಸ್ಯೆಗಳ ಆಗರ: ಈ ಮಾರುಕಟ್ಟೆಯಲ್ಲಿ ಸುಮಾರು 40 ಮಹಿಳೆಯರು ಮೀನು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಸಮಸ್ಯೆ ಕಾರಣಕ್ಕಾಗಿ ಸಂಜೆ ವ್ಯಾಪಾರದ ವೇಳೆ ಮಹಿಳೆಯರು ಕಟ್ಟಡದ ಹೊರಗೆ ಕುಳಿತು ಮೀನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಹೊರಗಡೆಯಿಂದ ಸುಸಜ್ಜಿತವಾಗಿ ಕಾಣುವ ಮೀನು ಮಾರುಕಟ್ಟೆಯೊಳಗೆ ಬಹಳಷ್ಟು ಸಮಸ್ಯೆಗಳು ಕಾಣಸಿಗುತ್ತವೆ. ಕಟ್ಟಡದ ಪ್ರಮುಖ ದ್ವಾರಗಳು ಸರಿಯಾಗಿಲ್ಲ. ಮೀನು ಮಾರುವ ಮಹಿಳೆಯರು ಕೂರುವ ಕುರ್ಚಿಗಳು ಹಾಳಾಗಿವೆ. ಫ್ಯಾನುಗಳು ತಿರುಗದೇ ಅದೆಷ್ಟೋ ಸಮಯಗಳಾಗಿದ್ದು ಒಂದಷ್ಟು ಫ್ಯಾನಿನ ರೆಕ್ಕೆಗಳು ತುಕ್ಕು ಹಿಡಿದು ಮುರಿದಿದೆ.
ಟ್ಯೂಬ್ ಲೈಟ್ ಕಳಚಿ ಬೀಳುವ ಸ್ಥಿತಿಗೆ ತಲುಪಿದೆ. ಚರಂಡಿ ಸಮಸ್ಯೆಯೂ ಕೂಡ ಇಲ್ಲಿನ ಮಹಿಳೆಯರನ್ನು ಕಾಡುತ್ತಿದೆ. ಕರಾರಿನ ಮೇಲೆ ಒಂದು ವರ್ಷದ ಅವಧಿಗೆ ಮೀನುಮಾರುಕಟ್ಟೆ ಸ್ವಚ್ಚತೆ ನೋಡಿಕೊಳ್ಳಲು ಖಾಸಗಿಯವರಿಗೆ ಟೆಂಡರ್ ನೀಡಲಾಗಿದೆ. ಇಲ್ಲಿನ ಕೆಲ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಪಂಚಾಯತ್ ಸಹಕಾರ ನೀಡಬೇಕು. ನಾವು ಸ್ವಚ್ಚತೆ ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಎನ್ನುತ್ತಾರೆ ಟೆಂಡರ್ ಪಡೆದವರು.
‘ಕಳೆದ ಆರು ವರ್ಷಗಳ ಹಿಂದೆ ಈ ಮೀನುಮಾರುಕಟ್ಟೆ ಕಟ್ಟಡ ನಿರ್ಮಿಸಿದ್ದು ಸುಮಾರು 40 ಮಹಿಳೆಯರು ಇದನ್ನು ಆಶ್ರಯಿಸಿದ್ದೇವೆ. ಶಟರ್, ಬಾಗಿಲು, ಫ್ಯಾನ್ ಸಹಿತ ಒಂದಷ್ಟು ಸಮಸ್ಯೆಗಳಿವೆ. ಬೆಳಿಗ್ಗೆ ಮಾರುಕಟ್ಟೆ ಒಳಗೆ ಕುಳಿತು ಮೀನು ಮಾರಾಟ ಮಾಡುತ್ತೇವೆ. ಸಂಜೆ ಸೊಳ್ಳೆ ಕಾಟ, ಗಾಳಿ ಇಲ್ಲದಿರುವ ಕಾರಣ ಹೊರಗಡೆ ಹೋಗಿ ಕೂರುತ್ತೇವೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಪಂಗೆ ಮನವಿ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಶೀಘ್ರ ನಮ್ಮ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’
- ಕಮಲಾ, ಅಧ್ಯಕ್ಷೆ, ಗಂಗೊಳ್ಳಿ ಮೀನುಮಾರುಕಟ್ಟೆ
‘ಗಂಗೊಳ್ಳಿ ಮೀನುಮಾರುಕಟ್ಟೆ ಸಮಸ್ಯೆ ಬಗ್ಗೆ ಮಾಹಿತಿ ಇದ್ದು ಇದರ ದುರಸ್ತಿಗೆ ಈ ವರ್ಷ ಹಣ ಮೀಸಲಿರಿಸಲಾಗಿದೆ. ಹೆಚ್ಚಿನ ಅನುದಾನ ಬಂದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು. ಈ ಮೂಲಕ ಅಗತ್ಯ ಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಸ್ಚಚ್ಚತೆ ಬಗ್ಗೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗುವುದು’
-ಉಮಾಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗಂಗೊಳ್ಳಿ