ಗಂಗೊಳ್ಳಿ ದೇವಸ್ಥಾನದ ಚಿನ್ನಾಭರಣ ಕಳವು ಪ್ರಕರಣ: ಬಂಧಿತ ಅರ್ಚಕನಿಂದ ಚಿನ್ನಾಭರಣ ವಶ

Update: 2024-10-06 13:48 GMT

ನರಸಿಂಹ ಭಟ್

ಗಂಗೊಳ್ಳಿ: ಗಂಗೊಳ್ಳಿ ಖಾರ್ವಿಕೇರಿ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನದಲ್ಲಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅರ್ಚಕ ಶಿರಸಿ ಮೂಲದ ನರಸಿಂಹ ಭಟ್(43)ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಗಂಗೊಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇ 16ರಿಂದ ಸೆ.21ರ ಮಧ್ಯಾವಧಿಯಲ್ಲಿ ದೇವಸ್ಥಾನದ ಅರ್ಚಕನಾಗಿದ್ದ ಆರೋಪಿ ನರಸಿಂಹ ಭಟ್, ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳ ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳನ್ನು ಇರಿಸಿದ್ದನು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಸೆ.22ರಂದು ಬಂಧಿಸಿದ್ದರು.

ಬಂಧಿತ ಆರೋಪಿ ನರಸಿಂಹ ಭಟ್ ವಿಚಾರಣೆ ವೇಳೆ ಈ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯು ತನ್ನ ಸ್ವಂತಕ್ಕಾಗಿ ದೇವಸ್ಥಾನದ ಚಿನ್ನಾಭರಣಗಳನ್ನು ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡಮಾನವಿರಿಸಿರುವುದಾಗಿ ತಿಳಿಸಿದ್ದನು. ಅದರಂತೆ ಪೊಲೀಸರು ಇದೀಗ ಬ್ಯಾಂಕ್ ಹಾಗೂ ಸೊಸೈಟಿಗಳಿಂದ ಚಿನ್ನದ ಜೋಬಿನ ಸರ, ಚಿನ್ನದ ಕಾಸಿ ತಾಳಿ ಸರ, ಚಿನ್ನದ ಕರಿಮಣಿ ಸರ, ಚಿನ್ನದ ತಾಳಿ, ಚಿನ್ನದ ನಕ್ಲೇಸ್ ಸರ ಸೇರಿದಂತೆ ಒಟ್ಟು 20.48 ಲಕ್ಷ ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಠಾಣಾ ಉಪನಿರೀಕ್ಷಕರಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಸಿಬ್ಬಂದಿ ನಾಗರಾಜ, ಶಾಂತರಾಮ ಶೆಟ್ಟಿ, ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News