ಗಂಗೊಳ್ಳಿ | ಸಮುದ್ರಪಾಲಾಗಿದ್ದ ಯುವಕನ ಮೃತದೇಹ ಪತ್ತೆ
ಗಂಗೊಳ್ಳಿ: ಮಂಗಳವಾರ ಮಧ್ಯಾಹ್ನದ ವೇಳೆ ತ್ರಾಸಿ ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಅಲೆಯ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದ ಯುವಕನ ಮೃತದೇಹ ಬುಧವಾರ ಪತ್ತೆಯಾಗಿದೆ.
ಮೂಲತಃ ಗದಗದ ಪ್ರಸಕ್ತ ಕಾಪುವಿನಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಪೀರ್ ಸಾಬ್(21) ಮೃತಪಟ್ಟವರು. ಅವರ ಮೃತದೇಹ ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ ಎಂಬಲ್ಲಿ ಪತ್ತೆಯಾಗಿದ್ದು, ಪ್ರದೇಶ ಘಟನೆ ನಡೆದ ತ್ರಾಸಿಯಿಂದ 2 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ.
ಘಟನೆ ವಿವರ: ಗದಗ ಜಿಲ್ಲೆಯ ನಿವಾಸಿ ಸಿರಾಜ್ ಎನ್ನುವರು ಲಾರಿಯನ್ನು ಚಲಾಯಿಸಿಕೊಂಡು ಕಾಪುವಿಗೆ ಬಂದಿದ್ದು ಊರಿನವರು ಬಂದಿದ್ದನ್ನು ನೋಡಿದ ಪೀರ್ ಸಾಬ್ ಹಾಗೂ ಸಿದ್ದಪ್ಪ ಎನ್ನುವರು ತಾವು ಮನೆಗೆ ಹೋಗುವುದಾಗಿ ಹೇಳಿದ್ದು ಸಿರಾಜ್ ಲಾರಿಯಲ್ಲಿ ಊರಿಗೆ ತೆರಳುತ್ತಿದ್ದರು. ಅಪರಾಹ್ನ 2:30ರ ಹೊತ್ತಿಗೆ ತ್ರಾಸಿ ಬೀಚ್ ಬಳಿ ಕಲ್ಲುಗಳ ಮೇಲೆ ನಿಂತು ಸಮುದ್ರವನ್ನು ನೋಡುತ್ತಿದ್ದು ಪೀರ್ ಸಾಬ್ ಸಮುದ್ರಕ್ಕೆ ಬೆನ್ನು ಹಾಕಿ ಮೊಬೈಲ್ ಫೋನ್ ನಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಸಮುದ್ರದ ಅಲೆ ಅಪ್ಪಳಿಸಿ ಪೀರ್ ಸಾಬ್ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದರು.
ಮೃತದೇಹಕ್ಕಾಗಿ ಮಂಗಳವಾರ ತಡರಾತ್ರಿ ತನಕ ಹುಡುಕಾಟ ನಡೆದಿತ್ತು. ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ 24x7 ಆಪತ್ಬಾಂಧವ ಆ್ಯಂಬುಲೆನ್ಸ್ ಕಾರ್ಯಕರ್ತರು ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.