ಸರಕಾರದ ಯೋಜನೆಗಳು ಶೇ.ನೂರರಷ್ಟು ಅನುಷ್ಠಾನಗೊಳ್ಳಬೇಕು: ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ.ರೇಜು

Update: 2023-07-25 13:44 GMT

ಉಡುಪಿ, ಜು.25: ಜನಸಾಮಾನ್ಯರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸೇರಿದಂತೆ ಸರಕಾರದ ಅಭಿವೃದ್ಧಿ ಯೋಜನೆ ಗಳು ಮತ್ತು ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಅನುಷ್ಠಾನಗೊಳಿಸಿ ಜನೋಪಯೋಗಿಯಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.

ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ನೆರೆಯಿಂದಾಗಿ ಇದುವರೆಗೆ 9 ಮಾನವ ಜೀವಹಾನಿಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಮಳೆ ಅಧಿಕವಾಗಿ ಸುರಿದು ಮತ್ತಷ್ಟು ಅವಘಢಗಳು ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚಿನ ಹಾನಿಯನ್ನು ತಪ್ಪಿಸಲು ಅಗತ್ಯ ವಿರುವ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಾನವ ಜೀವಹಾನಿಯಾಗದಂತೆ ಎಚ್ಚರವಹಿಸಬೇಕು ಎಂದರು.

ಈಗಾಗಲೇ ಜಿಲ್ಲೆಗೆ ಪ್ರಕೃತಿ ವಿಕೋಪ ತುರ್ತು ನಿರ್ವಹಣೆಗಾಗಿ ಎಸ್‌ಡಿಅರ್‌ಎಫ್‌ನ 11 ಜನರ ತಂಡವನ್ನು ನಿಯೋಜಿಸಲಾಗಿದೆ ಹಾಗೂ 300ಕ್ಕೂ ಅಧಿಕ ಸ್ವಯಂ ಸೇವಕರಿಗೆ ಆಪದಮಿತ್ರ ಯೋಜನೆಯಡಿ ತರಬೇತಿ ನೀಡಲಾಗಿದೆ. ಇವರುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತೊಂದರೆಯಾದಾಗ ವಿಕೋಪ ಪರಿಹಾರ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು ಎಂದರು.

ಗೃಹಲಕ್ಷಿಗೆ 34,561 ನೊಂದಣಿ: ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 34,561 ನೊಂದಣಿ ಆಗಿದ್ದು, ನೊಂದಣಿ ಕಾರ್ಯದಲ್ಲಿ ಯಾವುದೇ ರೀತಿಯ ಗೊಂದಲಗಳಾಗದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪ್ರತಿದಿನ ನೊಂದಣಿ ಕೇಂದ್ರಗಳಿಗೆ ನೀಡಿರುವ ಗುರಿಯನ್ನು ತಲುಪಬೇಕು. ಪ್ರಜಾಪ್ರತಿನಿಧಿಗಳು ಸಹ ನೊಂದಣಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನೊಂದಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ ತಿಂಗಳು ಶಕ್ತಿ ಯೋಜನೆಯಡಿ 29,790 ಮಹಿಳೆಯರು ಪ್ರಯಾಣಿಸಿದ್ದು, ಈವರೆಗೆ 11,11,533 ಮಂದಿಯ ವೆಚ್ಚವನ್ನು ಭರಿಸಲಾ ಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2,33,291 ಗ್ರಾಹಕರ ಅರ್ಜಿಗಳನ್ನು ನೊಂದಾಯಿಸಲಾಗಿದೆ ಎಂದರು.

ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಈಗಾಗಲೇ ಸರಕಾರದ ಹಂತದಲ್ಲಿ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 250ಕ್ಕೂ ಹೆಚ್ಚಿನ ಶಿಕ್ಷಕರು ಆಗಮಿಸಿದ್ದಾರೆ. ಇವರುಗಳನ್ನು ಜಿಲ್ಲೆಗೆ ಅಗತ್ಯವಿರುವ ಕಡೆ ನಿಯೋಜಿಸಬೇಕೆಂದು ಡಾ.ರೇಜು ಸೂಚನೆ ನೀಡಿದರು.

ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ವೈದ್ಯರುಗಳು ಹಾಗೂ ಅರೋಗ್ಯ ಸಿಬ್ಬಂದಿಗಳು ಮುಂದಾಗಬೇಕು. ಆರೋಗ್ಯ ಇಲಾಖೆಯ ಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಾಗ ಮಕ್ಕಳಿಗೆ ಉನ್ನತ ಚಿಕಿತ್ಸೆಗೆ ಅವಶ್ಯವಿದ್ದಲ್ಲಿ ಅವರುಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ಉನ್ನತ ಆಸ್ಪತ್ರೆ ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಎಂಡೋಸಲ್ಫಾನ್ ಪೀಡಿತ ಸಂತ್ರಸ್ಥರಿಗೆ ಆರೋಗ್ಯ ಸುಧಾರಣೆ ಹಾಗೂ ಪುರ್ನವಸತಿ ಕಾರ್ಯ ಕ್ರಮಗಳ ಅನುಷ್ಠಾನ ಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದವರು ಸೂಚನೆ ನೀಡಿದರು.

ಜಲಜೀವನ್ ಮಿಷನ್: ಗ್ರಾಮೀಣ ಭಾಗದ ಪ್ರತಿ ಗ್ರಾಮಗಳ ಮನೆಗಳಿಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ನಳ ಸಂಪರ್ಕ ವನ್ನು ಕಲ್ಪಿಸಬೇಕು. ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. ಮೂರನೇ ಹಂತದ ಕಾಮಗಾರಿ ಕೈಗೊಳ್ಳುವಾಗ ಯಾವುದೇ ಮನೆಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಎಂದರು.

ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಅಮೃತ್ ಯೋಜನೆಯ ಕಾಮಗಾರಿಯನ್ನು ಮುಂದಿನ ವರ್ಷದ ಸೆಪ್ಟಂಬರ್ ಒಳಗೆ ಪೂರ್ಣಗೊಳಿಸಬೇಕು ಎಂದರು.

ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಬೇಕು. ಮರು ಭಿತ್ತನೆಗೆ ಅವಶ್ಯವಿರುವ ಭಿತ್ತನೆ ಬೀಜಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಬೆಳೆ ವಿಮೆ ವ್ಯಾಪ್ತಿಗೆ ಎಲ್ಲಾ ಬೆಳೆಗಳನ್ನು ತರಲು ಮುಂದಾಗಬೇಕು. ಪ್ರಧಾನಮಂತ್ರಿ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯೋಜನೆ ಬದ್ಧಗೊಳಿಸುವಿಕೆಯ ಪ್ರಗತಿ ನಿಗದಿತ ಗುರಿಯನ್ನು ಮುಟ್ಟಬೇಕು ಎಂದರು.

ಸರಕಾರದ ಹಂತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಅನುದಾನಗಳು ಬಿಡುಗಡೆಯಾಗದೇ ಇದ್ದಲ್ಲಿ ಅಂತಹವುಗಳನ್ನು ನಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ಬಿಡುಗಡೆಗೊಳಿಸಲು ಹಾಗೂ ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಿಬ್ಬಂದಿ ಕೊರತೆಯನ್ನು ಸರಿತೂಗಿಸಲು ಪ್ರಯತ್ನಿ ಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ ನಾಯಕ್, ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಓ ಗಣಪತಿ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

350 ಕೊರಗರಿಗೆ ಪಡಿತರ ಚೀಟಿ ಇಲ್ಲ

ಜಿಲ್ಲೆಯ ಕೊರಗ ಸಮುದಾಯದ 350ಕ್ಕೂ ಹೆಚ್ಚು ಜನರಿಗೆ ಬಿಪಿಎಲ್ ಕಾರ್ಡ್ ದೊರೆಕಿಲ್ಲ. ಪ್ರಸ್ತುತ ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಇವರುಗಳಿಗೆ ಆದ್ಯತೆಯ ಮೇಲೆ ಪಡಿತರ ಚೀಟಿ ನೀಡಲು ಸರಕಾರದಿಂದ ವಿಶೇಷ ಅನುಮತಿ ಪಡೆದು ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು ಎಂದು ಡಾ.ರೇಜು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News