ಆಷಾಡದಲ್ಲಿ ಆರೋಗ್ಯ, ಆಹಾರ ಮಾಹಿತಿ ಕಾರ್ಯಕ್ರಮ

Update: 2023-08-01 12:47 GMT

ಉಡುಪಿ, ಆ.1: ಪ್ರಸ್ತುತ ಕಾಲಘಟ್ಟದಲ್ಲಿ ಇಂದಿನ ಯುವ ಪೀಳಿಗೆ ಅತ್ಯಾಧುನಿಕ ಸವಲತ್ತು, ಆರ್ಥಿಕ ಸಬಲತೆ ಹೊಂದಿರುವ ಕಾರಣ ತಮ್ಮ ಹಿರಿಯರು ಅನುಭವಿಸಿದ ಸಂಕಷ್ಟಗಳ ಬಗ್ಗೆ ಅರಿತು ಕೊಂಡಿಲ್ಲ. ಆಟಿ (ಆಷಾಢ) ತಿಂಗಳ ಬವಣೆ ಇಂದು ರೂಢಿಯಲ್ಲಿಲ್ಲದ ಕಾರಣ, ಅವುಗಳನ್ನು ಆಚರಣೆಯ ಮೂಲಕ ತಿಳಿಸುವ ಪ್ರಯತ್ನ ಇಂದು ಸಂಘ ಸಂಸ್ಥೆಗಳ ಕಾರ್ಯ ಕ್ರಮಗಳ ಮೂಲಕ ನಡೆಯುತ್ತಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಡಾ.ಅನು ಆಯುರ್ವೇದ, ಚೈತನ್ಯ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಅಂಬಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಅನು ಡೆಂಟಲ್ ಮತ್ತು ಆಯುರ್ವೇದ ಸಂಸ್ಥೆಯ ಮೆಂಡನ್ಸ್ ಗಿರಿಜಾ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಆಷಾಢದಲ್ಲಿ ಆರೋಗ್ಯ ಮತ್ತು ಆಹಾರ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗತಿಸಿ ಹೋದ ಕಾಲದ ದಾಖಲೀಕರಣ ನಡೆಸಲು ಅಸಾಧ್ಯವಾದರೂ, ಅಂದಿನ ಬದುಕಿನ ಸಂಕಷ್ಟಗಳನ್ನು ಅನುಭವಿಸಿದ ಅದೆಷ್ಟೋ ಹಿರಿಯ ಜೀವಗಳು ನಮ್ಮೊಂದಿಗೆ ಇದ್ದಾರೆ. ಅಂದು ನಿರಂತರ ಸುರಿಯುವ ಮಳೆ, ಕೃಷಿ ಚಟುವಟಿಕೆ ಗಳು ಒಂದೆಡೆಯಾದರೆ ಶೀತ, ಜ್ವರ ಮೊದಲಾದ ಕಾಯಿಲೆ ಕಸಾಲೆಗಳ ನಡುವೆ ಹೊಯ್ದಾಟ ನಡೆಸಬೇಕಿತ್ತು. ಇಂದಿನಂತೆ ಬೀದಿಗೊಂದು ಚಿಕಿತ್ಸಾಲಯಗಳು ಇಲ್ಲದ ಆ ದಿನಗಳಲ್ಲಿ ಪ್ರಕೃತಿಯಲ್ಲಿಯೇ ಸಿಗುವ ಗೆಡ್ಡೆಗೆಣಸುಗಳು, ಸೊಪ್ಪು, ಗಿಡ ಮೂಲಿಕೆಗಳೇ ಜೀವವುಳಿಸುವ ಸಾಧನಗಳಾಗಿದ್ದವು. ಅಂತಹ ಸಂಕಷ್ಟದ ಬದುಕನ್ನು ಬಾಳಿದ ನಮ್ಮ ಹಿರಿಯರು, ಅವರ ಆಹಾರ ಕ್ರಮಗಳ ಬಗ್ಗೆ ಇಂತಹ ಕಾರ್ಯಕ್ರಮ ಗಳಿಂದ ಬೆಳಕು ಚೆಲ್ಲಲು ಸಾಧ್ಯ ಎಂದರು.

ಅನು ಆಯುರ್ವೇದದ ವೈದ್ಯೆ ಡಾ.ಸೌಮ್ಯ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತೆ ಅಶ್ವಿನಿ ಆರ್.ಶೆಟ್ಟಿ ಅವರು ಆಷಾಢದ ಆಚರಣೆ ಮತ್ತು ಆಹಾರ ಕ್ರಮದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಂಬಲಪಾಡಿ ಅಧ್ಯಕ್ಷ ಅಶೋಕ್ ಶೆಟ್ಟಿ, ಮೋಹನದಾಸ್ ಪೈ, ಮಧುಮೇಹ ತಜ್ಞೆ ಡಾ.ಶ್ರತಿ ಬಲ್ಲಾಳ್, ಜೋಸೆಫ್ ರೆಬೆಲ್ಲೊ ಮತ್ತಿತರರು ಉಪಸ್ಥಿತರಿದ್ದರು. ಲೀಲಾ ಭಟ್ ಸ್ವಾಗತಿಸಿ, ನೀಲಾವತಿ ಎ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News