ಕರಾವಳಿ ಆರ್ಥಿಕತೆಗೆ ಉತ್ತೇಜನ ಯೋಜನೆ ಪರಿಷ್ಕರಣೆಗೆ ಹೈಕೋರ್ಟ್ ಸೂಚನೆ: ಜಗದೀಶ್ ಶೆಟ್ಟರ್

Update: 2023-08-26 13:43 GMT

ಮಣಿಪಾಲ: ಪರಿಸರವಾದಿಗಳ ವಿರೋಧಕ್ಕೆ ಸಿಕ್ಕಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಅಂಕೋಲ-ಹುಬ್ಬಳ್ಳಿ ರೈಲು ಯೋಜನೆ ಕಾರ್ಯರೂಪಕ್ಕೆ ಬಂದರೆ, ಉತ್ತರ ಕನ್ನಡವೂ ಸೇರಿದಂತೆ ಕರಾವಳಿ ಹಾಗೂ ಉತ್ತರ ಕರ್ನಾಟಕದದ ಆರ್ಥಿ ಕತೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಇದೀಗ ರಾಜ್ಯ ಹೈಕೋರ್ಟ್ ಯೋಜನೆಯ ಪರಿಷ್ಕರಣೆಗೆ ನೈರುತ್ಯ ರೈಲ್ವೆಗೆ ಸೂಚಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮುಂಬಯಿ ಮೂಲದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಿತ ಕೈಗಾರಿಕೀಕರಣ ಹಾಗೂ ಕರಾವಳಿ ಕರ್ನಾಟಕದಲ್ಲಿ ಪೂರ್ಣರೂಪದ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತಂತೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್ ಸಭಾಂಗಣ ಆಯೋಜಿಸಲಾದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾದುಹೋಗುವುದರಿಂದ ಅರಣ್ಯಪ್ರದೇಶಕ್ಕೆ ಹಾಗೂ ವನ್ಯಜೀವಿಗಳಿಗೆ ಅಪಾಯವಿದೆ ಎಂದು ಪರಿಸರ ಹೋರಾಟಗಾರರು ನ್ಯಾಯಾಲಯದಲ್ಲಿ ಹಾಕಿದ ಪಿಐಎಲ್‌ನಿಂದ ನೆನೆ ಗುದಿಗೆ ಬಿದ್ದಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ರೈಲು ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರೂ ಮುಂದುವರಿಯಲು ಸಾಧ್ಯವಾಗಿಲ್ಲ ಎಂದರು.

ಇದೀಗ ರಾಜ್ಯ ಹೈಕೋರ್ಟ್ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ನೈರುತ್ಯ ರೈಲ್ವೆಗೆ ಸೂಚಿಸಿದ್ದು, ಈ ವರದಿ ಯನ್ನು ಹೈಕೋರ್ಟ್ ಹಾಗೂ ವನ್ಯಜೀವಿ ಮಂಡಳಿ ಒಪ್ಪಿಕೊಂಡರೆ ಯೋಜನೆ ಕಾರ್ಯಗತಗೊಳ್ಳಲಿದೆ. ಆ ಭಾಗದ ಶಾಸಕ ನಾಗಿ ಅದಕ್ಕಾಗಿ ನಾನು ತುಂಬಾ ಪ್ರಯತ್ನ ಪಟ್ಟಿದ್ದೇನೆ ಎಂದರು.

ಉತ್ತರ ಕನ್ನಡದ ಬೇಲಿಕೇರಿ ಬಂದರು ಹಾಗೂ ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗದ ಕನಸು ಸಾಕಾರಗೊಂಡರೆ ಉತ್ತರ ಕನ್ನಡ ಹಾಗೂ ಕರಾವಳಿಯ ಆರ್ಥಿಕತೆ ಇನ್ನಷ್ಟು ಬೂಸ್ಟ್ ಸಿಕ್ಕಲಿದೆ. ಇದೇ ರೀತಿ ಗದಗ್‌ನಲ್ಲೂ ಸ್ಟೀಲ್ ಪ್ಲಾಂಟ್ ಒಂದನ್ನು ಸ್ಥಾಪಿಸಲು ನಡೆಸಿದ ಪ್ರಯತ್ನ ಪರಿಸರದ ಹೆಸರಿನಲ್ಲಿ ಕೆಲವೇ ಮಂದಿ ನಡೆಸಿದ ಹೋರಾಟದಿಂದ ವಿಫಲವಾಗಿದೆ. ಇದರಿಂದ ಗದಗ್ ಈಗಲೂ ಹಿಂದುಳಿದ ಜಿಲ್ಲೆಯಾಗಿದೆ ಎಂದರು.

ಒಂದು ಪ್ರದೇಶ ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕಾಗಿ ಎಸ್‌ಇಝಡ್ ಸ್ಥಾಪನೆಗೊಳ್ಳಬೇಕು. ಆದರೆ ಈಗ ಪರಿಸರದ ಹೆಸರಿನಲ್ಲಿ ಅಭಿವೃದ್ಧಿಗೆ ತಡೆಯುಂಟು ಮಾಡಲಾಗುತ್ತದೆ. ಇಂಥ ಮನಸ್ಥಿತಿ ಬದಲಾಗಬೇಕು ಎಂದರು.

ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಮಾತನಾಡಿ, ಕರಾವಳಿ ಭಾಗದಲ್ಲಿ ಪರಿಸರ ಸಹ್ಯ ಹಾಗೂ ಮಾಲಿನ್ಯರಹಿತ ಕೈಗಾರಿಕೆಗಳ ಸ್ಥಾಪನೆಗೆ ಇಲ್ಲಿನ ಜನತೆ ಒತ್ತಾಯಿಸಬೇಕಿದೆ. ಈಗ ಅಭಿವೃದ್ಧಿ ಎಂದರೆ ಪ್ರಕೃತಿಯ ಮೇಲೆ ಕೊಡಲಿ, ಮರಗಳ ಮಾರಣಹೋಮ ಎಂಬಂತಾಗಿದೆ. ಇದು ತಪ್ಪಬೇಕು ಎಂದರು.

ಕರಾವಳಿ ಭಾಗಕ್ಕೆ ಐಟಿ ಉದ್ಯಮವನ್ನು ತರುವ ಬಗ್ಗೆ ಸಂಬಂಧಿತರು ಗಂಭೀರವಾಗಿ ಚಿಂತಿಸಬೇಕಿದೆ. ಉಡುಪಿ, ದ.ಕ. ಭಾಗದಲ್ಲಿ ತಜ್ಞ ಇಂಜಿನಿಯರ್ ಸೇರಿ ಮಾನವ ಸಂಪನ್ಮೂಲಕ್ಕೆ, ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಹೀಗಾಗಿ ಸಾಫ್ಟ್‌ವೇರ್ ಪಾರ್ಕ್‌ನ್ನು ಇಲ್ಲಿ ಪ್ರಾರಂಭಿಸಬೇಕು ಎಂದರು.

ಅದೇ ರೀತಿ ಪ್ರವಾಸೋದ್ಯಮ, ಪರಿಸರ ಸಹ್ಯ ಕೈಗಾರಿಕೆಗಳ ಸ್ಥಾಪನೆಗೂ ಅವಕಾಶಗಳಿವೆ. ಇವುಗಳನ್ನು ಖಾಸಗಿಯವರ ಮೂಲಕವೇ ತರಬೇಕು. ವ್ಯಾಪಾರ-ವ್ಯವಹಾರ ಸರಕಾರದ ಕೆಲಸವಲ್ಲ. ಅದನ್ನು ಖಾಸಗಿಯವರಿಗೆ ಬಿಡಬೇಕು ಎಂದು ದೇಶಪಾಂಡೆ ನುಡಿದರು.

ಕರಾವಳಿ ಅಭಿವೃದ್ಧಿ ಕುರಿತಂತೆ ಸಮಿತಿ ಸಿದ್ಧಪಡಿಸಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮುಂದಿನ 100 ವರ್ಷಗಳ ನೀಲನಕಾಶೆ ‘ವಿಷನ್ ಪ್ಲಾನ್’ನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಬಿಡುಗಡೆ ಗೊಳಿಸಿದರು. ಪರಿಸರ ಹಾಗೂ ಅಭಿವೃದ್ಧಿಯನ್ನು ಜೊತೆ ಜೊತೆಯಲ್ಲಿ ಕೊಂಡೊಯ್ದರೆ ಜಿಲ್ಲೆಯ ಆರ್ಥಿಕತೆಯಲ್ಲಿ ಸ್ಥಿರತೆ ಕಾಣಬಹುದು ಎಂದರು.

ಹೊಸ ವಿಮಾನ ನಿಲ್ದಾಣ: ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಧ್ಯೆ ವಿಮಾನ ನಿಲ್ದಾಣ ವೊಂದನ್ನು ನಿರ್ಮಿಸಿದರೆ ಈ ಎರಡು ಜಿಲ್ಲೆಗಳ ಅಭಿವೃದ್ಧಿಗೆ ಭಾರೀ ಉತ್ತೇಜನ ಸಿಗುತ್ತದೆ ಎಂದು ಖಾದರ್ ಅಭಿಪ್ರಾಯಪಟ್ಟರು.

ಸಮಿತಿಯ ಅಧ್ಯಕ್ಷ ಎಲ್.ವಿ.ಅಮೀನ್ ವಿಚಾರಸಂಕಿರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಂಸ್ಥಾಪಕ ತೋನ್ಸೆ ಜಯಶ್ರೀಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಐವನ್ ಡಿಸೋಜ, ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಹಾಗೂ ದಯಾಸಾಗರ ಚೌಟ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News