ಹಿರಿಯಡ್ಕ: ಮನೆಗೆ ನುಗ್ಗಿ 8.50ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಹಿರಿಯಡ್ಕ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಸೋಮವಾರ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಬಳಿ ನಡೆದಿದೆ.
ಓಂತಿಬೆಟ್ಟುವಿನ ಶಂಕರ ಟಿ.ಶೆಟ್ಟಿ ಎಂಬವರು ಮನೆಗೆ ಬೀಗ ಹಾಕಿ ತನ್ನ ಹೆಂಡತಿಯೊಂದಿಗೆ ಹಿರಿಯಡ್ಕ ದೇವಸ್ಥಾನಕ್ಕೆ ಹೋಗಿ, ವಾಪಾಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಅಡುಗೆ ಮನೆಯ ಕಡೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮಲಗುವ ಕೋಣೆಯ ಮರದ ಕಪಾಟಿನಲ್ಲಿದ್ದ ಚಿನ್ನದ ಚೈನ್ ಹಾಗೂ ಆರು ಚಿನ್ನದ ಬಳೆ, ಎರಡು ಚಿನ್ನದ ಕೈಯ ಕಡಗ ಬಳೆ ಮತ್ತು ಅದೇ ಕೋಣೆಯ ಕಬ್ಬಿಣದ ಗಾಡ್ರೇಜ್ ಲಾಕರ್ನಲ್ಲಿಟ್ಟಿದ್ದ ಎರಡು ಉಂಗುರ ಹಾಗೂ 20,000 ರೂ. ನಗದು ಹಾಗೂ ಪಕ್ಕದ ಇನ್ನೊಂದು ಮಲಗುವ ಕೋಣೆಯ ಕಬ್ಬಿಣದ ಗಾಡ್ರೇಜ್ನಲ್ಲಿದ್ದ ಕೆನಾನ್ ಕ್ಯಾಮರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ,
ಕಳವು ಮಾಡಿದ ಒಟ್ಟು 242 ಗ್ರಾಂ ಚಿನ್ನಾಭರಣ ಸಹಿತ ಎಲ್ಲ ಸೊತ್ತುಗಳ ಒಟ್ಟು ವೌಲ್ಯ 8,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.