ಇಸ್ರೇಲ್ ದೇಶದಲ್ಲಿ ಉಡುಪಿ ಜಿಲ್ಲೆಯ ನಾಗರಿಕರಿದ್ದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ: ಡಿಸಿ ಡಾ.ವಿದ್ಯಾಕುಮಾರಿ

Update: 2023-10-09 17:01 GMT

ಉಡುಪಿ, ಅ.9: ಯುದ್ಧಗ್ರಸ್ತ ಇಸ್ರೇಲ್‌ನಲ್ಲಿ ಅಪಾಯಕ್ಕೆ ಸಿಲುಕಿರುವ ಬಗ್ಗೆ, ಸಮಸ್ಯೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯ ನಾಗರಿಕರ ಕುರಿತಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಜಿಲ್ಲಾಡಳಿತಕ್ಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಪರಿಸ್ಥಿತಿ ಅವಲೋಕನ ಮಾಡಿ ಇನ್ನೆರಡು ದಿನಗಳಲ್ಲಿ ಯಾವುದೇ ಮಾಹಿತಿ ಬರಬಹುದು. ಇಲ್ಲಿಂದ ಹೋಗಿ ಅಲ್ಲಿರುವವರಿಗೆ ಸಮಸ್ಯೆಯಾಗಿರುವ ಬಗ್ಗೆ ಸ್ಥಳೀಯರೂ ಯಾರು ಕೂಡಾ ಇದುವರೆಗೆ ಮಾಹಿತಿ ಕೊಟ್ಟಿಲ್ಲ ಎಂದೂ ಅವರು ಹೇಳಿದರು.

ಯಾವುದೇ ಮಾಹಿತಿ ಬಂದರೆ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಳ್ಳುತ್ತದೆ ಎಂದ ಅವರು, ಇಸ್ರೇಲ್‌ನಲ್ಲಿ ಸ್ಥಳೀಯರ್ಯಾದರೂ ಇದ್ದರೆ ಇಸ್ರೇಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸ ಬಹುದು. ಅವರ ಕುಟುಂಬದವರೂಈ ಜಿಲ್ಲಾಡಳಿತಕ್ಕೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿಸಬಹುದು ಎಂದರು.

ಇಸ್ರೇಲ್‌ನಲ್ಲಿ ಉಡುಪಿ ಜಿಲ್ಲೆಯ ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತದ ಬಳಿ ನಿಖರ ಮಾಹಿತಿ ಇಲ್ಲ. ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ಇದ್ದು, ಅಲ್ಲಿಗೆ ಯಾರೇ ಆದರೂ ಮಾಹಿತಿ ನೀಡಬಹುದು. ಅವರಿಗೆ ಬಂದ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರಲು ಸಿಬ್ಬಂದಿಗೆ ತಿಳಿಸಲಾಗಿದೆ ಎಂದರು. ಆದರೆ ಇದುವರೆಗೆ ಉಡುಪಿ ಜಿಲ್ಲೆಯಿಂದ ಯಾರು ಕೂಡಾ ನಮ್ಮನ್ನು ಸಂಪರ್ಕಿಸಿಲ್ಲ ಎಂದವರು ಸ್ಪಷ್ಟಪಡಿಸಿದರು.

ಮಾಹಿತಿ ನೀಡಿ: ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ, ಇಸ್ರೇಲ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಹೋಗಿರುವ ಅಥವಾ ವಾಸವಾಗಿರುವ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ನಾಗರಿಕರಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ:1077 ಹಾಗೂ 0820-2574802 ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ: 080- 22340676, 080-22253707ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News