ಹಿರಿಯ ನಾಗರಿಕರ ಬದುಕು ಹಸನುಗೊಳಿಸುವುದು ಎಲ್ಲರ ಜವಾಬ್ದಾರಿ: ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ: ಯುವ ಜನಾಂಗದ ಬದುಕಿಗೆ ದಾರಿ ಮಾಡಿಕೊಡುವ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊ ಳಿಸುವುದು ಪ್ರತಿಯೊಬ್ಬ ಯುವಜನತೆಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ವೃದ್ಧಾಶ್ರಮಗಳು ಉಡುಪಿ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಿಗೆ ಬಕೆಟ್‌ಗೆ ಬಾಲ್ ಎಸೆಯುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡುತ್ತಿದ್ದರು.
ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ ಹಾಗೂ ಉತ್ತಮ ವಾತಾವರಣ ಕಲ್ಪಿಸುವ ಅರಿವು ಮೂಡಿ ಸುವ ನಿಟ್ಟಿನಲ್ಲಿ ಸರಕಾರ ಪ್ರತೀವರ್ಷ ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸುತಿದ್ದು, ಇದರ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹಿರಿಯ ನಾಗರಿಕರು ಯಾವುದೇ ಹಿಂಜರಿಕೆ ಇಲ್ಲದೆ ಸಕ್ರಿಯವಾಗಿ, ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರು ತಮ್ಮದೇ ವಯೋಮಾನ ದವರೊಂದಿಗೆ ಒಡನಾಡುವುದರಿಂದ ಮನಸ್ಸಿಗೆ ಹೊಸ ಹುರುಪು, ಲವಲವಿಕೆ ಉಂಟಾಗುವುದರೊಂದಿಗೆ ಜೀವನೋತ್ಸಾಹ ಹೆಚ್ಚುತ್ತದೆ. ಆದ್ದರಿಂದ ವಯಸ್ಸು ಕೇವಲ ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬ ಚಿಂತನೆಯೊಂದಿಗೆ ಪ್ರತಿಯೊಬ್ಬ ಹಿರಿಯ ನಾಗರಿಕರು ಎಲ್ಲಾ ಸ್ಪರ್ಧೆಗಳಲ್ಲಿ ಕ್ರಿಯಾಶೀಲರಾಗಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ ಮಾತನಾಡಿ, ಹಿರಿಯ ನಾಗರಿಕ ರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಹಿರಿಯ ನಾಗರಿಕರೆಂದು ಅವರು ಗಳನ್ನು ನಿರ್ಲಕ್ಷ್ಯ ಮಾಡದೇ ಅವರು ತಮ್ಮ ವೃದ್ಧಾಪ್ಯ ಜೀವನವನ್ನು ನೆಮ್ಮದಿಯಿಂದ ಸಾಗಿಸಲು ಅನುವು ಮಾಡಿಕೊಡ ಬೇಕು ಎಂದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ಜಿಲ್ಲಾ ಮಹಿಳಾ ಮಂಡಲದ ಒಕ್ಕೂಟದ ಸರಳ ಕಾಂಚನ್, ಬ್ರಹ್ಮಾವರ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಉದಯ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ನಾಗರಿಕರಿಗೆ ಕ್ರೀಡಾ ವಿಭಾಗದಲ್ಲಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ ಸ್ಪರ್ಧೆ ಹಾಗೂ ಬಕೆಟ್‌ನೊಳಗೆ ಬಾಲ್ ಎಸೆಯುವ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ ಸ್ಪರ್ಧೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ನಡೆದವು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಹೆಗ್ಡೆ ಸ್ವಾಗತಿಸಿ, ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ವಂದಿಸಿದರು.