ಕಾವಿ ಕಲೆಯ ಪ್ರಯೋಗಾತ್ಮಕ ಪ್ರದರ್ಶನ ‘ಕಾವಿ ವೈವಿಧ್ಯ’ ಉದ್ಘಾಟನೆ

Update: 2024-08-31 12:22 GMT

ಉಡುಪಿ, ಆ.31: ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವುಗಳ ವತಿಯಿಂದ ಬಡಗುಪೇಟೆ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಸಾಂಪ್ರದಾಯಿಕ ಹಾಗೂ ಜನಪದೀಯ ಸೊಗಡಿನ ಕಾವಿ ಕಲೆಯ ವಿಭಿನ್ನವಾದ ಪ್ರಯೋಗಾತ್ಮಕ ಕಲಾ ಪ್ರದರ್ಶನವನ್ನು ಚಿತ್ರಕಲಾ ಮಂದಿರ ಕಲಾ ಶಾಲೆಯ ಉಪನ್ಯಾಸಕಿ ವಿಜಯ ಲಕ್ಷ್ಮೀ ಎನ್. ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕವು ಹಲವು ಕಲೆಗಳ ತವರೂರು, ಇಲ್ಲಿನ ಕರಾವಳಿ ಭಾಗದ ಅತ್ಯದ್ಭುತವಾದ ಈ ಕಲೆಯು ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಅತಿ ಪ್ರಾಚೀನಕಲೆಯಾದ ಕಾವಿ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಉದ್ಯಮಿ ಆನಂದ ಕಾರ್ನಾಡ್ ಮಾತನಾಡಿ, ಕೊಂಕಣ ಕಲೆಗೆ ಬಹಳಷ್ಟು ಪ್ರಾಚೀನತೆ ಇದ್ದರೂ ಪ್ರಾಧಾನ್ಯತೆ ದೊರಕದಿರುವುದು ಬಹಳ ಖೇದಕರ ಸಂಗತಿ. ಬಹಳಷ್ಟು ಶೀಘ್ರದಲ್ಲಿ ಈ ಪಾರಂಪರಿಕ ಕಲೆಗೆ ಜಿ.ಐ. ಮಾನ್ಯತೆ ದೊರಕಲಿ. ಕಲಾವಿದರನ್ನು ಪೋಷಿಸುವ ಗುಣ ಹೆಚ್ಚಾಗಲಿ ಎಂದು ಹಾರೈಸಿದರು.

ಫೌಂಡೇಶನ್ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಮಾತನಾಡಿ ದರು. ಇದೇ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾದಲ್ಲಿ ಕಾವಿ ಕಲೆಯ ಅಧೀಕೃತ ಮಾರಾಟವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ ಆಕರ್ಷಕ ದರದಲ್ಲಿ ದೇಶೀಯ ಕಾವಿ ಕಲೆಯ ಮಾರುಕಟ್ಟೆಯನ್ನೂ ತೆರೆಯಲಾಯಿತು.

ಕಲಾ ಪ್ರದರ್ಶನದಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ಮಂಗಳೂರು ಭಾಗದ ಕಲಾವಿದರುಗಳಾದ ಶ್ರೀನಿವಾಸ ಆಚಾರ್, ರಮೇಶ್ ಅಂಬಾಡಿ, ರಾಜೇಶ್ ಶಿರ್ಸೀಕರ್, ವರ್ಷಾ ಎ.ಜೆ., ಆಶ್ಲೇಷ್ ಭಟ್, ವಿಕ್ರಮ್ ಸುವರ್ಣ, ನಯನಾ ಆಚಾರ್ಯ, ಕೀರ್ತಿ ಕುಮಾರ್, ಪುರಂದರ್ ಮಲ್ಪೆ, ಸೌಮ್ಯಾ ಆಚಾರ್ಯ, ರಾಘವೇಂದ್ರ ಕಲ್ಕೂರ, ಪುಷ್ಪಾಂಜಲಿ ರಾವ್, ಪುರಂದರ ಆಚಾರ್ಯ, ಬೇಬಿ ಎಂ.ರಾವ್, ಮಂಜುನಾಥ ರಾವ್, ಅಕ್ಷತಾ ವಿಶು ರಾವ್, ಸಂತೋಷ್ ಪೈ ಹಾಗೂ ಜನಾರ್ದನ ಹಾವಂಜೆ ಅವರ ಗಣೇಶ, ಸರಸ್ವತಿ, ಟ್ರೀಆಫ್ ಲೈಫ್, ಶ್ರೀರಾಮ, ಕೃಷ್ಣ, ಕೊರಗಜ್ಜ, ಮಂಡಲ ವಿನ್ಯಾಸಗಳು ಸಹಿತ ಸುಮಾರು 30 ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರದರ್ಶನವು ಸೆ.8ರವರೆಗೆ ಅಪರಾಹ್ನ 3ರಿಂದ 7ರತನಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News