ಕೋಡಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳ ಉದ್ಘಾಟನೆ

Update: 2025-02-22 14:52 IST
ಕೋಡಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳ ಉದ್ಘಾಟನೆ
  • whatsapp icon

ಕುಂದಾಪುರ, ಫೆ.22: ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದೊಂದಿಗೆ ಉದ್ಯೋಗ ಸೃಷ್ಟಿಸುವ ಅನಿವಾರ್ಯತೆಯಿದೆ. ಜಾತಿ-ಧರ್ಮವನ್ನೂ ಮೀರಿ ಉದ್ಯೋಗ ಮೇಳ ಆಯೋಜಿಸಿರುವ ಶಿಕ್ಷಣ ಸಂಸ್ಥೆಯ ದೂರಗಾಮಿ ಚಿಂತನೆ ಶ್ಲಾಘನೀಯವಾಗಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಕುಂದಾಪುರದ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ಕೋಡಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ಉದ್ಯೋಗ ಮೇಳ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಚುನಾಯಿತ ಜನಪ್ರತಿನಿಧಿಗಳು ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು. ಸಮಾಜಕ್ಕೆ ಒಳಿತು ಮಾಡುವ ಕೆಲಸಗಳು ಹೆಚ್ಚು-ಹೆಚ್ಚು ಆಗಬೇಕಾಗಿದೆ. ಜೀವನದಲ್ಲಿ ಯಶಸ್ಸು ಪಡೆಯಲು ಉತ್ತಮ ದೃಷ್ಟಿಕೋನ, ಪರಿಶ್ರಮ ಅಗತ್ಯ ಎಂದು ಅವರು ತಿಳಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ವಿದ್ಯಾ ಸಂಸ್ಥೆ ಕಟ್ಟಿ ಬೆಳೆಸುವುದು ಒಂದು ತಪಸ್ಸು. ಶಿಕ್ಷಣದಿಂದ ಸುಧಾರಣೆ ಸಾಧ್ಯ. ಹಾಗೆಯೇ ಶಿಕ್ಷಣ ಪಡೆದವರು ಉದ್ಯೋಗ ಗಳಿಸುವುದು ಅಗತ್ಯ. ಕರಾವಳಿ ಭಾಗದ ವಿದ್ಯಾಸಂಸ್ಥೆಗಳು ದೇಶದಲ್ಲಿಯೇ ಜನಮನ್ನಣೆಗೆ ಪಾತ್ರವಾಗಿದ್ದು, ಬ್ಯಾರೀಸ್ ಸಂಸ್ಥೆಯೂ ಕೂಡ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ, ಶಾಲಾ ಕಾಲೇಜುಗಳು ಕೇವಲ ಪದವಿಯನ್ನು ಮಾತ್ರ ನೀಡಿದರೆ ಸಾಲದು. ಅದರ ಜೊತೆಗೆ ಮುಂದೆ ಬದುಕನ್ನು ಕಟ್ಟಿಕೊಳ್ಳುವಂತಹ ಉದ್ಯೋಗವನ್ನು ಕೂಡ ಕಲ್ಪಿಸುವುದು ಅಷ್ಟೇ ಮುಖ್ಯ. ಪ್ರತಿಭಾನ್ವಿತ ಮಕ್ಕಳಿಗೆ ಉದ್ಯೋಗವನ್ನು ಕಲ್ಪಿಸುವ ಮುಖ್ಯ ಉದ್ದೇಶದೊಂದಿಗೆ ಈ ಅವಕಾಶಗಳನ್ನು ಕಲ್ಪಿಸಲಾಗಿದೆ. ಎಂದರು.

ಟ್ರಸ್ಟ್ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ವಿದ್ಯಾದಾನ ನಮ್ಮ ಗುರಿಯಾಗಿದ್ದು ಇದೀಗ ಉದ್ಯೋಗ ದಾನದ ಅವಕಾಶ ಸಿಕ್ಕಿದೆ. ವಿದ್ಯೆ ಕಲಿತರೆ ಸಾಲದು, ಉತ್ತಮ ಉದ್ಯೋಗ ಪಡೆಯುವ ಮೂಲಕ ಬದುಕಿನ ಮಹತ್ವದ ಘಟ್ಟ ತಲುಪಬೇಕು. ಉದ್ಯೋಗದಿಂದ ದೇಶ ಕಟ್ಟಲು ಸಾಧ್ಯವಿದೆ. ಉದ್ಯೋಗ ಅವಕಾಶ ಹುಡುಕುವ ಜೊತೆಗೆ ಉದ್ಯೋಗ ಸೃಷ್ಟಿಯತ್ತವೂ ಗಮನ ವಹಿಸಬೇಕು ಎಂದು ಹೇಳಿದರು.

ಕೇವಲ ಶಿಕ್ಷಣ, ಪದವಿ ಪಡೆಯುವುದರಿಂದ ಉದ್ಯೋಗ ಸಿಗದು. ಬದಲಾಗಿ ಉತ್ತಮ ಸಂಹವನ ಪ್ರಕ್ರಿಯೆ ಕೂಡ ಅತ್ಯಗತ್ಯ. ಸರಕಾರ ಮಾತ್ರದಿಂದಲೇ ಉದ್ಯೋಗ ಸೃಷ್ಟಿ ಅಸಾಧ್ಯ. ಇದಕ್ಕೆ ಸಾರ್ವಜನಿಕ ಸಹಕಾರವೂ ಅಗತ್ಯ. ಸ್ವ ಉದ್ಯೋಗ ಮಾಡಬಯಸುವ ಅರ್ಹರಿಗೆ ಸಹಕಾರ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಬೆಂಗಳೂರು ಇಎಸ್‌ಎಸ್‌ವಿಇಇ ರಿಕ್ರೂಟೆಕ್ ನಿರ್ದೇಶಕ ಜೀವನ್ ಕುಮಾರ್ ಎಸ್., ಎಕ್ಸ್‌ಪರ್ಟೈಸ್ ಇಂಡಿಯಾ ಆಪರೇಶನ್ಸ್ ಜನರಲ್ ಮೇನೆಜರ್ ಶೇಖ್ ಮೊಯ್ದಿನ್, ಪ್ರಮುಖರಾದ ಹನೀಫ್, ದೋಮ ಚಂದ್ರಶೇಖರ್, ಬ್ಯಾರೀಸ್ ಎಜ್ಯುಕೇಶನ್ ಟಸ್ಟ್‌ನ ವಿಶ್ವಸ್ಥ ಡಾ.ಆಸಿಫ್ ಬ್ಯಾರಿ, ಬಿ.ಎಡ್ ಕಾಲೇಜು ಪ್ರಾಂಶುಪಾಲ ಸಿದ್ದಪ್ಪಕೆ.ಎಸ್., ಬ್ಯಾರೀಸ್ ಸೀಸೈಡ್ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಡೀನ್ ಅಕಾಡಮಿಕ್ಸ್ ಡಾ.ಪೂರ್ಣಿಮಾ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಫಿರ್ದೌಸ್, ಜಯಶೀಲ ಶೆಟ್ಟಿ, ಜಟ್ಟಪ್ಪ, ಸುಮಿತ್ರಾ, ಸ್ಥಳೀಯ ಮುಖಂಡರಾದ ಪ್ರಭಾಕರ್ ಕೋಡಿ, ಗೋಪಾಲ ಪೂಜಾರಿ, ಅಬ್ದುಲ್ಲಾ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಪ್ರಿಯಾ ರೇಗೋ ಕಾರ್ಯಕ್ರಮ ನಿರೂಪಿಸಿದರು. ಲಮೀಜ್ ವಂದಿಸಿದರು. ಮೇಳದಲ್ಲಿ 30ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ಭಾಗವಹಿಸಿದ್ದವು.

ಮೊಟ್ಟಮೊದಲ ಬಾರಿಗೆ ಬ್ಯಾರೀಸ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡಿದ್ದ 2,000ಕ್ಕೂ ಅಧಿಕ ಉದ್ಯೋಗಾಂಕ್ಷಿಗಳಲ್ಲಿ 1,200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇವರಲ್ಲಿ ಸುಮಾರು 400 ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡರು. 200 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ನಲ್ಲಿದ್ದಾರೆ.

Delete Edit
Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News