ಬಿರುಗಾಳಿ ಸಹಿತ ಮಳೆಗೆ ನಲುಗಿದ ಉಡುಪಿ ಜಿಲ್ಲೆ; ನೂರಾರು ಮನೆಗಳಿಗೆ ಹಾನಿ

ಉಡುಪಿ, ಎ.15: ಸೋಮವಾರ ಸಂಜೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆಗೆ ಉಡುಪಿ ಜಿಲ್ಲೆ ಅಕ್ಷರಶ: ನಲುಗಿಹೋಯಿತು. ಯಾವುದೇ ಮುನ್ಸೂಚನೆ ಇಲ್ಲದೆ ನಾಲ್ಕು ಗಂಟೆ ಸುಮಾರಿಗೆ ಬೀಸಿದ ಸುಂಟರಗಾಳಿ ನೂರಾರು ಮರಗಳನ್ನು ಧರಾಶಾಹಿಗೊಳಿತಲ್ಲದೇ, ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿಯನ್ನುಂಟು ಮಾಡಿದೆ. ನೂರಾರು ಮನೆಗಳಿಗೂ ಹಾನಿಯಾದ ಮಾಹಿತಿ ಇದೆ.
ಜಿಲ್ಲೆಯಾದ್ಯಂತ ಸಾವಿರಾರು ಅಡಿಕೆ, ತೆಂಗು, ಬಾಳೆ ಗಿಡಗಳು ಬುಡಸಮೇತ ನೆಲಕ್ಕೊರಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. 50ಕ್ಕೂ ಅಧಿಕ ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವ ವರದಿಗಳು ಬಂದಿವೆ. ಸುರಿದ ಮಳೆಯ ಪ್ರಮಾಣ ಕಡಿಮೆ ಇದ್ದರೂ, ಬಿರುಗಾಳಿಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಪ್ರಾಕೃತಿಕ ಸಂಪತ್ತು, ವಿವಿಧ ಬಗೆಯ ಸೊತ್ತುಗಳು ಹಾನಿಗೊಳಗಾಗಿವೆ.
ಬಿರುಗಾಳಿಯಿಂದಾಗಿ ರಸ್ತೆ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಅಪಾರ ಪ್ರಮಾಣದ ಧೂಳು ನೆಲದಿಂದ ಮೇಲ ಕ್ಕೆದ್ದು ಜನರನ್ನು ಕಂಗಾಲುಗೊಳಿಸಿತು. ಇದರಿಂದಾಗಿ ರಸ್ತೆಯಲ್ಲಿ ಸಂಚಾರವೂ ಅಸ್ತವ್ಯಸ್ತಗೊಳ್ಳುವಂತಾ ಯಿತು. ಆಕಾಶದುದ್ದಕ್ಕೂ ತರಗೆಲೆಗಳು ಹಾರಾಡುವ ಅಪರೂಪದ ದೃಶ್ಯವನ್ನೂ ಹಲವು ಕಡೆಗಳಲ್ಲಿ ಜನರು ಕಾಣುವಂತಾಯಿತು.
ಇದರಿಂದಾಗಿ ಅನೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತು. ಭಾರೀ ಸಂಖ್ಯೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಮರಗಳು ನೆಲಕ್ಕುರುಳಿದ್ದರಿಂದ ನೂರಾರು ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳೂ ನೆಲವನ್ನ ಪಿದ್ದು, ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲು ಮೆಸ್ಕಾಂನ ಸಿಬ್ಬಂದಿಗಳು ಹರಸಾಹಸ ಪಡಬೇಕಾ ಯಿತು. ಇದರಿಂದಾಗಿ ಹೆಚ್ಚಿನ ಕಡೆಗಳಲ್ಲಿ ತಡರಾತ್ರಿಯ ಬಳಿಕವೇ ವಿದ್ಯುತ್ ಸಂಪರ್ಕ ಮರು ಸ್ಥಾಪನೆಗೊಂಡವು.
ಜಿಲ್ಲೆಯ ಕುಂದಾಪುರ, ಕಾಪು, ಬ್ರಹ್ಮಾವರ, ಕಾರ್ಕಳ, ಉಡುಪಿ, ಹೆಬ್ರಿ ಹೀಗೆ ಎಲ್ಲಾ ತಾಲೂಕುಗಳಿಂದಲೂ ಸೋಮವಾರ ಸಂಜೆಯ ಬಿರುಗಾಳಿ- ಮಳೆಗೆ ಮನೆಗಳು ಸೇರಿದಂತೆ, ಕೃಷಿಗೆ, ತೋಟಗಾರಿಕಾ ಬೆಳೆಗ ಳಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿರುವ ಮಾಹಿತಿಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕೇಂದ್ರಕ್ಕೆ ಬಂದಿವೆ.
ಉಡುಪಿ ಮತ್ತು ಕುಂದಾಪುರ ತಾಲೂಕುಗಳಿಂದ ಅತೀ ಹೆಚ್ಚಿನ ಹಾನಿಯ ವರದಿಗಳು ಬಂದಿವೆ. ಇವುಗಳಲ್ಲಿ ಉಡುಪಿ ತಾಲೂಕಿನ ಕೊಡವೂರಿನ ಸದಾನಂದ ಪೂಜಾರಿ ಹಾಗೂ ಪಾಂಡುರಂಗ ಎಂಬವರ ಆರ್‌ಸಿಸಿ ಮನೆಗಳ ಮೇಲೆ ಭಾರೀ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಹಾನಿಗೊಳಗಾಗಿವೆ. ಕಾಪು ತಾಲೂಕು ಶಿರ್ವದ ಪದ್ಮ ಪೂಜಾರಿ ಅವರ ಮನೆಯೂ ಗಾಳಿ- ಮಳೆಯಿಂದ ಸಂಪೂರ್ಣ ಹಾನಿಗೊಂಡ ವರದಿ ಬಂದಿದೆ.
ಹಿರಿಯಡ್ಕ ಸಮೀಪ ಹಾಳು ಉಗ್ಗೆಲ್ ಕೊಪ್ಪಳ ಸಮೀಪ ಇಂದಿರಾ ಸೇರಿಗಾರ್ತಿ ಎಂಬವರಿಗೆ ಸೇರಿದ ಮನೆಯ ಸಿಮೆಂಟ್ ಶೀಟ್‌ಗಳು, ವಿದ್ಯುತ್ ಕಂಬದ ವಯರ್ ಎಲ್ಲವೂ ಬೀಸಿದ ಸುಂಟರಗಾಳಿಗೆ ಹಾರಿ ಹೋಗಿವೆ. ಅಂದಾಜು ಸುಮಾರು ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿ ರುವುದಾಗಿ ಮನೆಯವರು ತಿಳಿಸಿದ್ದಾರೆ.
ಉಡುಪಿ ರಾಜಾಂಗಣ ಸಮೀಪದ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಬೃಹತ್ ಗಾತ್ರದ ಆಲದ ಮರವೊಂದು ಮನೆಯ ಮೇಲೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಮನೆಯೊಳಗಿದ್ದ ದಂಪತಿಗಳಾದ ರಾಘವೇಂದ್ರ ಭಟ್ (60) ಹಾಗೂ ನೀರಜಾ ಭಟ್ (49) ಗಾಯ ಗೊಂಡಿದ್ದು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಸಂಪೂರ್ಣ ಜಖಂಗೊಂಡಿದ್ದು ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ 6.7ಮಿ.ಮೀ. ಮಳೆ: ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಸರಾಸರಿ 6.7ಮಿ.ಮೀ. ಮಳೆ ಬಿದ್ದಿದೆ. ಕಾರ್ಕಳದಲ್ಲಿ ಅತ್ಯಧಿಕ 14.3ಮಿ.ಮೀ, ಹೆಬ್ರಿಯಲ್ಲಿ 12.8, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ ತಲಾ 6.8, ಉಡುಪಿಯಲ್ಲಿ 4.6ಮಿ.ಮೀ. ಮಳೆಯಾದ ಮಾಹಿತಿ ಇದೆ.


