ಕೆ. ಗೋವಿಂದ ಭಟ್‌ಗೆ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ

Update: 2025-03-24 20:13 IST
ಕೆ. ಗೋವಿಂದ ಭಟ್‌ಗೆ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ
  • whatsapp icon

ಉಡುಪಿ: ಪಲಿಮಾರು ಮಠದ ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಶಿಷ್ಯರಾದ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಕೊಡಮಾಡುವ ‘ಯಕ್ಷ ವಿದ್ಯಾಮಾನ್ಯ ಪ್ರಶಸ್ತಿ’ಗೆ ಈ ಬಾರಿ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರಾದ ಕೆ. ಗೋವಿಂದ ಭಟ್ ಆಯ್ಕೆಯಾಗಿದ್ದಾರೆ.

ಕೂಡ್ಲು, ಇರಾ, ಸುರತ್ಕಲ್ ಮತ್ತು ದೀರ್ಘಕಾಲ ಧರ್ಮಸ್ಥಳ ಮೇಳದಲ್ಲಿ ಪ್ರದಾನ ವೇಷಧಾರಿಯಾಗಿ ಒಟ್ಟು ಸುಮಾರು ಆರೂವರೆ ದಶಕ ಕಾಲ ಗೋವಿಂದ ಭಟ್ಟರು ಯಕ್ಷಗಾನ ತಿರುಗಾಟ ಮಾಡಿದ್ದಾರೆ. ಎಲ್ಲಾ ರೀತಿಯ ವೇಷಗಳನ್ನು ಮಾಡಿರುವ ಇವರು ಹಲವು ಪೌರಾಣಿಕ ಪಾತ್ರಗಳನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ.

ಯಕ್ಷಗುರುವಾಗಿ ನೂರಾರು ಶಿಷ್ಯರು, ವಿದ್ಯಾರ್ಥಿಗಳನ್ನು ಈ ಕ್ಷೇತ್ರಕ್ಕೆ ನೀಡಿದ ಇವರಿಗೆ ಎಪ್ರಿಲ್ 10ರ ಗುರುವಾರ ಬೆಳಗ್ಗೆ 10:30ಕ್ಕೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಯಕ್ಷ ವಿದ್ಯಾಮಾನ್ಯ ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು 50,000ರೂ. ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News