ಕಾಪು: ಸಮುದ್ರ ಮಧ್ಯೆ ಮೀನುಗಾರರಿಗೆ ಹಲ್ಲೆ; ಲಕ್ಷಾಂತರ ರೂ.ಮೌಲ್ಯದ ಮೀನು ದರೋಡೆ

Update: 2024-01-31 07:46 GMT

ಕಾಪು, ಜ.31: ಮೀನುಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ಸುಲಿಗೆ ಮಾಡಿ, ಐದು ಮಂದಿ ಮೀನುಗಾರರಿಗೆ ಹಲ್ಲೆ ನಡೆಸಿರುವ ಘಟನೆ ಜ.30ರಂದು ಬೆಳಗ್ಗೆ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರ ಸಮುದ್ರದ ಮಧ್ಯೆ ನಡೆದಿದೆ.

ಹಲ್ಲೆಯಿಂದ ಪರ್ವತಯ್ಯ, ಕೊಂಡಯ್ಯ ಎಂಬವರು ಗಂಭೀರ ಗಾಯ ಗೊಂಡಿದ್ದು, ರಘುರಾಮಯ್ಯ, ಶಿವರಾಜ್ ಹಾಗೂ ಶೀನು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಮುಹಮ್ಮದ್ ಮುಸ್ತಫ ಬಾಷಾ ಎಂಬವರ ಟ್ರಾಲ್ ಬೋಟ್ ನಲ್ಲಿ ಜ.27ರಂದು ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘುರಾಮಯ್ಯ, ಶಿವರಾಜ್, ಕೆ.ಶೀನು, ಏಳುಮಲೆ, ಚಿನ್ನೋಡು, ರಾಜು ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ಜ.30ರಂದು ವಾಪಾಸ್ಸು ಮಂಗಳೂರು ಬಂದರಿಗೆ ಬರುತ್ತಿರುವಾಗ ಎದುರಿಗೆ ಬಂದ ಹನುಮ ಜ್ಯೋತಿ ಎಂಬ ಹೆಸರಿನ ಪರ್ಶಿನ್ ಬೋಟ್ ನಲ್ಲಿದ್ದ 15-20 ಜನರ ಪೈಕಿ 7-8 ಮಂದಿ ಟ್ರಾಲ್ ಬೋಟ್ ಒಳಗೆ ಹತ್ತಿ, ಬೋಟ್ ನಲ್ಲಿದ್ದ ಮೀನಿನ ಬಾಕ್ಸ್ ಗಳನ್ನು ತೆಗೆದು ಅವರ ಪರ್ಶಿನ್ ಬೋಟ್ ಗೆ ಹಾಕಿದ್ದಾರೆ ಎನ್ನಲಾಗಿದೆ.

ಈ ವೇಳೆ ತಡೆಯಲು ಹೋದ ಶೀನು ಮತ್ತ ರಘು ರಾಮಯ್ಯ ಅವರನ್ನು ಪರ್ಶಿನ್ ಬೋಟ್ ಬಳಿಗೆ ಬಂದ 5-7 ಜನರಿದ್ದ ನಾಡ ದೋಣಿಗೆ ಎತ್ತಿ ಹಾಕಿ ಅಲ್ಲಿಂದ ಕರೆದುಕೊಂಡು ಹೋಗಲಾಯಿತು. ಬಳಿಕ ಪರ್ಶಿನ್ ಬೋಟ್ ನಲ್ಲಿದ್ದವರು ಟ್ರಾಲ್ ಬೋಟ್ ನಲ್ಲಿದ್ದ ಮೀನುಗಾರರಿಗೆ ಹಲ್ಲೆ ನಡೆಸಿ, 4 ಮೊಬೈಲ್ ಗಳನ್ನು ಹಾಗೂ 2 ಲಕ್ಷ ಮೌಲ್ಯದ 12 ಬಾಕ್ಸ್ ಮೀನು ಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News