ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ| ಬೈಕಿನಲ್ಲಿದ್ದ ತಂದೆ ಮಕ್ಕಳು ಸಹಿತ ನಾಲ್ವರು ಮೃತ್ಯು: ತಾಯಿ ಗಂಭೀರ

Update: 2024-09-30 15:02 GMT

ಕಾರ್ಕಳ: ಹೊಸ್ಮಾರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಮಕ್ಕಳು ಸಹಿತ ಒಟ್ಟು ನಾಲ್ವರು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಧರ್ಮಸ್ಥಳದ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಎದುರಿನಿಂದ ಅಂದರೆ ಬಜಗೋಳಿ ಕಡೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಈಚರ್ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ವೇಣೂರು ಗಾಂಧಿನಗರದ ನಿವಾಸಿ ಸುರೇಶ್ ಆಚಾರ್ಯ(35) ಹಾಗೂ ಅವರ ಮಕ್ಕಳಾದ ಸುಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2) ಎಂದು ಗುರುತಿಸಲಾಗಿದೆ. ಸುರೇಶ್ ಆಚಾರ್ಯರ ಪತ್ನಿ ಮೀನಾಕ್ಷಿ ಆಚಾರ್ಯ(32) ಎಂಬವರು ಗಂಭೀರವಾಗಿ ಗಾಯಗೊಂಡು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರದ ಕೆಲಸ ಮಾಡಿಕೊಂಡಿದ್ದ ಸುರೇಶ್ ಆಚಾರ್ಯ ತನ್ನ ಬೈಕಿನಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವೇಣೂರಿನಿಂದ ನಲ್ಲೂರಿನಲ್ಲಿರುವ ತನ್ನ ಮೂಲ ಮನೆಗೆ ಹೊರಟಿದ್ದರು. ದಾರಿ ಮಧ್ಯೆ ಪಾಜೆಗುಡ್ಡೆ ತಿರುವಿನಲ್ಲಿ ಈಚರ್ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುರೇಶ್ ಆಚಾರ್ಯ, ಮಕ್ಕಳಾದ ಸುಮೀಕ್ಷಾ, ಸುಶಾಂತ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.

ಇವರಲ್ಲಿ ತೀವ್ರವಾಗಿ ಗಾಯಗೊಂಡ ಸುಶ್ಮಿತಾ ಹಾಗೂ ಮೀನಾಕ್ಷಿ ಅವರನ್ನು ಕೂಡಲೇ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯೆ ಸುಶ್ಮಿತಾ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಮೀನಾಕ್ಷಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಈಚರ್ ಚಾಲಕ ಹೇಮಂತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 






 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News