ಕರ್ನಾಟಕ ಬಿಜೆಪಿ ‘ನಾಯಕನಿಲ್ಲದ’ ಪಕ್ಷ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

Update: 2023-08-26 13:07 GMT

ಮಣಿಪಾಲ, ಆ.26: ಕರ್ನಾಟಕದಲ್ಲಿ ಬಿಜೆಪಿ ‘ಲೀಡರ್ ಲೆಸ್’ (ನಾಯಕನಿಲ್ಲದ) ಪಕ್ಷವಾಗಿದೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕನನ್ನು, ಪಕ್ಷದ ರಾಜ್ಯ ಘಟಕಕ್ಕೆ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಆ ಪಕ್ಷಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟಿ ಹೇಳಿದ್ದಾರೆ.

ಮಣಿಪಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದಾಗ ರಾಜ್ಯ ಬಿಜೆಪಿ ನಾಯಕರು ಬ್ಯಾರಿಗೇಟ್ ಹೊರಗೆ ನಿಂತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಹಾಗೂ ನಾಯಕ. ಬಿಜೆಪಿ ಒಳಗೆ ಏನಾಗುತ್ತಿದೆ ಎಂಬ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ ಎಂದರು.

ಆದರೆ ಒಂದು ರಾಷ್ಟ್ರೀಯ ಪಕ್ಷಕ್ಕೆ 3-4 ತಿಂಗಳಿಂದ ಉಭಯ ಸದನಗಳಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಇನ್ನು ಸಾಧ್ಯವಾಗಿಲ್ಲ. ಹೊಸ ರಾಜ್ಯಾಧ್ಯಕ್ಷನ ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದರೆ, ಅದು ಎಂಥ ಸ್ಥಿತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ. ನಿಜವಾಗಿ ಬಿಜೆಪಿ ಬಹಳ ಶೋಚನೀಯ ಪರಿಸ್ಥಿತಿಯಲ್ಲಿದೆ, ಬಹಳ ದಯನೀಯ ಸ್ಥಿತಿಯಲ್ಲಿದೆ ಎಂದರು.

ಪ್ರಧಾನಿ ಬಂದಾಗ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಆಗದೇ ಇರುವುದು ಮತ್ತೊಂದು ಶೋಚನೀಯ ವಿಚಾರ. ಮೊದಲು 120 ಸ್ಥಾನ ಪಡೆದಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ 60+ ಸೀಟು ಗೆದ್ದು ದಯನೀಯ ಸ್ಥಿತಿಗೆ ಬಂದು ನಿಂತಿದೆ. ಬಿಜೆಪಿಯಲ್ಲಿ ಮಿಸ್ ಹ್ಯಾಂಡಲಿಂಗ್ ಮತ್ತು ಮಿಸ್ ಮ್ಯಾನೇಜ್ಮೆಂಟ್ ಇದೆ. ಪಕ್ಷಕ್ಕೆ 30ವರ್ಷಕ್ಕೂ ಅಧಿಕ ದುಡಿದ ನಮ್ಮಂಥ ನಾಯಕರನ್ನೇ ಪಕ್ಷದಿಂದ ಹೊರಗೆ ಹಾಕಿದ್ದಾರೆ ಎಂದರು. ಇಂದಿನ ಘಟನೆಗಳು ಅದರ ದಯನೀಯ ಪರಿಸ್ಥಿತಿಗೆ ಕನ್ನಡಿ ಎನ್ನಬಹುದು ಎಂದರು.

ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ತಮ್ಮನ್ನು ಸಂಪರ್ಕಿಸಿ ಮಾತನಾಡಿರುವ ಬಗ್ಗೆ ಕೇಳಿಬರುತ್ತಿರುವ ಸುದ್ದಿಯ ಬಗ್ಗೆ ಜಗದೀಶ್ ಶೆಟ್ಟರನ್ನು ಪ್ರಶ್ನಿಸಿದಾಗ, ನನಗೆ ಇದುವರೆಗೆ ಆ ಪಕ್ಷದಿಂದ ಯಾರೂ ಕರೆ ಮಾಡಿಲ್ಲ. ಅಮಿತ್ ಶಾ ಆಗಲಿ, ಮತ್ತೊಬ್ಬರಾಗಲಿ ಯಾರೂ ಈವರೆಗೆ ಕರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಜವಾಗಿ ಕರ್ನಾಟಕ ಬಿಜೆಪಿ ಈಗ ಲೀಡರ್ ಲೆಸ್ ಆಗಿದೆ. ಬಿಜೆಪಿಗೆ ಒಬ್ಬ ನಾಯಕ ಎಂಬುದೇ ಇಲ್ಲ. ಹೀಗಾಗಿ ಅದರ ನಾಯಕರು ಬೇರೆ ಬೇರೆ ಕಡೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರಾಗಿರುವ ಶೆಟ್ಟರ್ ನುಡಿದರು.

ಕರ್ನಾಟಕದಲ್ಲಿ ಬಿಜೆಪಿ ಇನ್ನೂ ದಯನೀಯ ಪರಿಸ್ಥಿತಿಗೆ ಹೋಗುತ್ತದೆ. ಬಿಜೆಪಿ ಒಳಗೆ ಸಾಕಷ್ಟು ಜನ ನೊಂದಿದ್ದಾರೆ. ಸಂಕಟ ಪಡುತ್ತಿದ್ದಾರೆ. ಬಿಜೆಪಿ ಯನ್ನು ಬಿಟ್ಟು ಹೊರಗೆ ಬರಲು ಬಹಳಷ್ಟು ಜನ ತಯಾರಾಗಿದ್ದಾರೆ. ಸಾಕಷ್ಟು ಮಂದಿ ನನಗೆ ಕರೆ ಮಾಡಿ ಸಂಕಟ ತೋಡಿಕೊಳ್ಳುತಿದ್ದಾರೆ ಎಂದರು.

ನನಗೆ ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಕರೆ ಬಂದಿಲ್ಲ. ಅಂಥ ಯಾವುದೇ ಕರೆ ಬಾರದೆ ಈ ಎಲ್ಲಾ ಚರ್ಚೆಗಳು ಯಾಕೆ?. ಅಂಥ ಕರೆ ಮಾಡಿದರೆ ನಾನೇ ಮಾಧ್ಯಮಗಳಿಗೆ ತಿಳಿಸುತ್ತೇನೆ. ಕರೆ ಬರುವ ಮೊದಲು ಯಾಕೆ ಆ ಬಗ್ಗೆ ಚರ್ಚೆ ಮಾಡಬೇಕು ಎಂದವರು ಮರುಪ್ರಶ್ನಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಶೆಟ್ಟರ್, ಕಾಂಗ್ರೆಸ್ ಕನಿಷ್ಠ 12ರಿಂದ 15 ಸ್ಥಾನ ಗೆಲ್ಲುವುದು ನಿಶ್ಚಿತ. ಮುಂದೆ ಅಂದಿನ ಪರಿಸ್ಥಿತಿ ನೋಡಿ 15ಕ್ಕಿಂತ ಹೆಚ್ಚು ಸ್ಥಾನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಸೇರಲು ರಾಜ್ಯದ ಎಲ್ಲಾ ತಾಲೂಕು, ಜಿಲ್ಲೆಗಳಲ್ಲೂ ಬಿಜೆಪಿ ಮಂದಿ ಉತ್ಸುಕರಾಗಿದ್ದಾರೆ ಎಂದರು.

ರಾಜ್ಯದಲ್ಲಿರುವ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿ ಭಾರತೀಯ ಜನತಾ ಪಕ್ಷ ಇದ್ದುದರಿಂದ ಪಕ್ಷದಲ್ಲಿ ಈ ಅವ್ಯವಸ್ಥೆ ಯಾಗಿದೆ. ಈ ಬಗ್ಗೆ ಸಾಕಷ್ಟು ಸಲ ಹೇಳಿದರೂ ಯಾರೂ ಕೇಳುವವರಿಲ್ಲ ಎಂದರು.

ಆಪರೇಷನ್ ಹಸ್ತ ಅಲ್ಲ: ಇಂದು ಬಿಜೆಪಿಯಿಂದ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಬರುವುದನ್ನು ‘ಆಪರೇಷನ್ ಹಸ್ತ’ ಎಂದು ಯಾಕೆ ಕರೆಯುತ್ತೀರಿ ಎಂದು ಪ್ರಶ್ನಿಸಿದ ಶೆಟ್ಟರ್, ಬರುವವರೆಲ್ಲರೂ ಸ್ವಯಂ ಇಚ್ಛೆಯಿಂದ ಬರುತಿದ್ದಾರೆ. ಅವರೇ ಬಂದು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಬರುವ ಇಚ್ಛೆ ತೋಡಿಕೊಳ್ಳುತಿದ್ದಾರೆ. ಎಲ್ಲಾದರೂ ಕಾಂಗ್ರೆಸ್ ನಾಯಕರೇ ಬಲಾತ್ಕಾರವಾಗಿ, ಆಮಿಷ ತೋರಿಸಿ ಪಕ್ಷಕ್ಕೆ ಸೆಳೆದರು ಅದು ಆಪರೇಷನ್ ಹಸ್ತ ಎನಿಸಿಕೊಳ್ಳುತ್ತದೆ ಎಂದು ಅವರು ನುಡಿದರು.

ಬಿಜೆಪಿಯಲ್ಲಿ ನನ್ನಂತೆ ಅನ್ಯಾಯಕ್ಕೊಗಾದವರು ಬಹಳ ಮಂದಿ ಇದ್ದಾರೆ. ಜನಸಂಘದ ಕಾಲದಿಂದ ಪಕ್ಷದಲ್ಲಿ ಇದ್ದ ನನಗೇ ಅಗೌರವ ತೋರಿಸಿದರು, ಸ್ವಾಭಿಮಾನಕ್ಕೆ ಧಕ್ಕೆ ತಂದರು. ಎಂಎಲ್‌ಎ ಸೀಟು ನೀಡದೇ ಅನ್ಯಾಯ ಮಾಡಿದರು. ನಾನು ಅದನ್ನು ಬಹಿರಂಗವಾಗಿ ಹೇಳಿಕೊಂಡು ಪಕ್ಷದಿಂದ ಹೊರಬಂದೆ. ಆದರೆ ಈ ಅನ್ಯಾಯಕ್ಕೊಳಗಾದವರು ಬಹಳ ಮಂದಿ ಇದ್ದು, ಅವರಿಗೆ ಅದನ್ನು ಬಹಿರಂಗ ಹೇಳಲಾಗುತ್ತಿಲ್ಲ. ಆದರೆ ಇವತ್ತಲ್ಲ, ನಾಳೆ ಅವರೆಲ್ಲ ಖಂಡಿತ ಪಕ್ಷದಿಂದ ಹೊರಬರುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News