2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಗೆ ‘ಪಾರ್ತಿಸುಬ್ಬ ಪ್ರಶಸ್ತಿ’

Update: 2024-09-14 13:31 GMT

(ಬನ್ನಂಜೆ ಸಂಜೀವ ಸುವರ್ಣ)

ಉಡುಪಿ, ಸೆ.14: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ವಿವಿಧ ಯಕ್ಷಗಾನ ಪ್ರಶಸ್ತಿಗಳನ್ನು ಇಂದಿಲ್ಲಿ ಪ್ರಕಟಿಸಲಾಗಿದ್ದು, ಯಕ್ಷಗುರುಗಳೆಂದೇ ಖ್ಯಾತರಾದ 70 ವರ್ಷ ಪ್ರಾಯದ ಉಡುಪಿಯ ಬನ್ನಂಜೆ ಸಂಜೀವ ಸುವರ್ಣರನ್ನು ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಕಟಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಾರಿಯ ಅಕಾಡೆಮಿಯ ಪ್ರಶಸ್ತಿಗಳನ್ನು ಪ್ರಕಟಿಸಿ ದರು. ಪಾರ್ತಿಸುಬ್ಬ ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರಗಳನ್ನು ಒಳಗೊಂಡಿರುತ್ತದೆ ಎಂದವರು ತಿಳಿಸಿದರು.

ಅಲ್ಲದೇ ಐವರು ಕಲಾವಿದರು 2023ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದರೆ, ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನದ ಒಟ್ಟು 10 ಮಂದಿ ಕಲಾವಿದರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಒಬ್ಬ ರಿಗೆ ದತ್ತಿನಿಧಿ ಪ್ರಶಸ್ತಿ ಹಾಗೂ ನಾಲ್ವರು ಲೇಖಕರಿಗೆ 2022 ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದೂ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಮುಂದಿನ ನವೆಂಬರ್ ತಿಂಗಳ ಎರಡನೇ ವಾರ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲಾ ಪ್ರಶಸ್ತಿ ವಿಜೇತರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಇಲಾಖಾ ಸಚಿ ವರು, ಉಸ್ತುವಾರಿ ಸಚಿವರು ಹಾಗೂ ಇತರ ಗಣ್ಯರು ಉಪಸ್ಥಿತರಿರುವರು ಎಂದರು.

ಪ್ರಶಸ್ತಿ ವಿಜೇತರ ವಿವರ ಹೀಗಿದೆ...

ಗೌರವ ಪ್ರಶಸ್ತಿ: ತಲಾ 50,000ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಒಳಗೊಂಡ ಗೌರವ ಪ್ರಶಸ್ತಿಗೆ ಆಯ್ಕೆಯಾದವರು ತೆಂಕುತಿಟ್ಟಿನ ಭಾಗವತರಾದ ಬೆಳ್ತಂಗಡಿಯ ದಿನೇಶ್ ಅಮ್ಮಣ್ಣಾಯ, ಮೂಡಲಪಾಯ ಯಕ್ಷಗಾನದ ಭಾಗವತ ಬೆಂಗಳೂರಿನ ನಾರಾಯಣಪ್ಪ ಎ.ಆರ್., ಯಕ್ಷಗಾನ ಅರ್ಥಧಾರಿ ಪುತ್ತೂರಿನ ಎಂ.ಜಬ್ಬಾರ್ ಸುಮೋ, ತೆಂಕು ಮತ್ತು ಬಡಗುತಿಟ್ಟು ಗಳ ಭಾಗವತ ಮುಂಬಯಿಯ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ತೆಂಕುತಿಟ್ಟಿನ ವೇಷಧಾರಿ ಬಂಟ್ವಾಳದ ಚೆನ್ನಪ್ಪ ಗೌಡ ಸಜಿಪ.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿ: ಯಕ್ಷಸಿರಿ ಪ್ರಶಸ್ತಿಗೆ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಪುರಸ್ಕೃತರಿಗೆ ತಲಾ 25,000ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುವುದು.

ಪ್ರಶಸ್ತಿಗೆ ತೆಂಕುತಿಟ್ಟು ವೇಷಧಾರಿ ಕಾಸರಗೋಡಿನ ರಘುನಾಥ ಶೆಟ್ಟಿ ಬಾಯಾರು, ತೆಂಕು ತಿಟ್ಟಿನ ಪ್ರಸಾಧನ ಕಲಾವಿದ ಹಾಗೂ ವೇಷಧಾರಿ ಬಂಟ್ವಾಳದ ದಿವಾಕರದಾಸ ಕಾವಳಕಟ್ಟೆ, ತೆಂಕುತಿಟ್ಟು ಬಣ್ಣದ ವೇಷಧಾರಿ ಸುಳ್ಯದ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗುತಿಟ್ಟು ವೇಷಧಾರಿ ಕುಂದಾಪುರದ ನರಾಡಿ ಭೋಜರಾಜ ಶೆಟ್ಟಿ, ಬಡಗುತಿಟ್ಟಿನ ಚಂಡೆ ವಾದಕ ಬೈಂದೂರಿನ ಸದಾನಂದ ಪ್ರಭು, ಬಡಗುತಿಟ್ಟು ಹಾಸ್ಯಗಾರ ಬೈಂದೂರಿನ ಹೊಳೆಮಗೆ ನಾಗಪ್ಪ ಮರಕಾಲ, ಬಡಗುತಿಟ್ಟು ವೇಷಧಾರಿ ಉ.ಕ. ಸಿದ್ಧಾಪುರದ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕ ಹಾಗೂ ಬಡಗುತಿಟ್ಟುಗಳ ಸ್ತ್ರೀವೇಷಧಾರಿ ಕುಂದಾಪುರದ ಬಾಬು ಕುಲಾಲ್ ಹಳ್ಳಾಡಿ, ಮೂಡಲಪಾಯ ಯಕ್ಷಗಾನದ ಭಾಗವತ ತುಮಕೂರಿನ ಶಿವಯ್ಯ ಹಾಗೂ ಮೂಡಲಪಾಯ ಯಕ್ಷಗಾನದ ಭಾಗವತ ಕೋಲಾರದ ಜೀಯಪ್ಪ ಇವರು ಆಯ್ಕೆಯಾಗಿದ್ದಾರೆ.

ದತ್ತಿನಿಧಿ ಪ್ರಶಸ್ತಿ: 2023ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ ಬಡಗುತಿಟ್ಟಿನ ಭಾಗವತ ಹೊನ್ನಾವರದ ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ 25,000ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.

ಪುಸ್ತಕ ಬಹುಮಾನ ಪ್ರಶಸ್ತಿ: 2022ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಉಡುಪಿಯ ವಿದ್ವಾನ್ ಗಣಪತಿ ಭಟ್ ಹಾಗೂ ಬೆಂಗಳೂರಿನ ಡಾ.ಮನೋರಮಾ ಬಿ.ಎನ್. ಇವರ ಕೃತಿಗಳನ್ನೂ, 2023ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡದ ಡಾ.ಸತೀಶ್ ಜಿ.ನಾಯ್ಕ ಹಾಗೂ ಕೋಟದ ಎಚ್. ಸುಜಯೀಂದ್ರ ಹಂದೆ ಇವರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಇವರು ತಲಾ 25,000 ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ ಎಂದು ಡಾ.ತಲ್ಲೂರು ತಿಳಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಬೆಂಗಳೂರಿನಲ್ಲಿರುವ ಕನ್ನಡ ಭವನ ದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನ ಕ್ಷೇತ್ರದ ಸಾಧಕರನ್ನು 2023ನೇ ಸಾಲಿನ ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಿತು. ಅದೇ ರೀತಿ ಪುಸ್ತಕ ಬಹುಮಾನಿತರನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಜಿ.ಸುಧಾಕರ ಶೆಟ್ಟಿ ಉಲ್ಲಾಳ, ವಿದ್ಯಾಧರ ಜಲವಳ್ಳಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News