ಕಾಟಾಚಾರದ ಜನತಾ ದರ್ಶನ ಆಗಲು ಬಿಡಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-09-25 13:57 GMT

ಉಡುಪಿ, ಸೆ.25: ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯ ಕ್ರಮ ಜನತಾ ದರ್ಶನಕ್ಕೆ ಫಲ ಸಿಗಬೇಕಾ ದರೆ ಅಧಿಕಾರಿಗಳು ಚುರುಕು ಆಗಬೇಕು. ಅಹವಾಲುಗಳನ್ನು ಅಧಿಕಾರಿಗಳು ಕಾಲಮಿತಿಯೊಳಗೆ ಹೊಣೆಗಾರಿಕೆ ಯಿಂದ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ವನ್ನು ಕಾಟಾಚಾರಕ್ಕೆ ಆಗಲು ಬಿಡುವುದಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಣಿಪಾಲದ ರಜತಾದ್ರಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸೋಮವಾರ ನಡೆದ ’ಜನತಾ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಯಾವುದೇ ಇಲಾಖೆಯಾದರೂ, ಎಷ್ಟೆ ದೊಡ್ಡ ಅಧಿಕಾರಿಗಳಾದರೂ ನಾವು ಬಂದಿರುವುದು ಜನರ ಕೆಲಸ ಮಾಡಲು ಎಂಬ ಸಾಮಾನ್ಯ ಜ್ಞಾನವನ್ನು ಇಟ್ಟು ಕೊಳ್ಳಬೇಕು. ಸರಕಾರ ಹಾಗೂ ಅಧಿಕಾರಿಗಳು ಇರುವುದು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಲು ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ಮುಂದಿನ ಜನತಾ ದರ್ಶನದಲ್ಲಿ ಹಿಂದಿನ ಜನತಾ ದರ್ಶನದ ಅರ್ಜಿ ವಿಲೇವಾರಿ ಬಗ್ಗೆ ಪರಿಶೀಲನೆ ಮಾಡಲಾಗುವುದು. ಅದರ ನಂತರವೇ ಹೊಸ ಅರ್ಜಿಗಳ ವಿಲೇವಾರಿಗೆ ಮುಂದಾಗುವುದು. ಆದುದರಿಂದ ಅಧಿಕಾರಿಗಳು ಹೃದಯವಂತರಾಗಿ ಜನಸಾಮಾನ್ಯರ ಕೆಲಸವನ್ನು ಮಾಡಬೇಕು ಎಂದು ಅವರು ತಿಳಿಸಿದರು.

ಜನರ ಎಷ್ಟೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೂ ದಿನನಿತ್ಯ ಹೊಸ ಹೊಸ ಸಮಸ್ಯೆಗಳು ಸೃಷ್ಠಿಯಾಗುತ್ತಲೇ ಇರುತ್ತದೆ. ಕಂದಾಯ, ಪೊಲೀಸ್, ಅರಣ್ಯ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳು ಸಾಕಷ್ಟು ಇರುತ್ತದೆ. ಬಹುತೇಕ ಸಮಸ್ಯೆಗಳಿಗೆ ಪರಿಹಾರವೇ ಸಿಗುವುದಿಲ್ಲ. ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ಸುತ್ತಾಡಿ ಜನಸಾಮಾನ್ಯರು ಪರಾದಾಡುವಂತಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಸರಕಾರದ ವಿರುದ್ಧ ಅಪಸ್ವರ ಎತ್ತುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಿಸಿ ಮನ್ನಾ ಜಾಗದ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಶಾಸಕರಾದ ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಕುಂದಾಪುರ ಉಪವಿಭಾಗಧಿಕಾರಿ ರಶ್ಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಪಂ ಸಿಇಓ ಡಾ.ಪ್ರಸನ್ನ ಎಚ್. ಸ್ವಾಗತಿಸಿದರು. ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಂದ ವಿವಿಧ ಅಹವಾಲು ಅರ್ಜಿ ಸ್ವೀಕರಿಸಲು ಕೌಂಟರ್‌ಗಳನ್ನು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ವಸ್ತು ಪ್ರದರ್ಶನದ ಮಳಿಗೆಯನ್ನು ತೆರೆಯಲಾಗಿತ್ತು.

‘ಉಡುಪಿ ಜಿಲ್ಲೆಗೆ ತಿಂಗಳಿಗೆ ಎರಡು ಬಾರಿ ಆಗಮಿಸಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಸಮೇತ ಸ್ಪಂದಿಸುವ ಕಾರ್ಯ ಮಾಡಲಾಗುವುದು. ಜಿಲ್ಲಾಮಟ್ಟದ ಈ ಜನತಾ ದರ್ಶನವನ್ನು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ನಡೆಸಲು ಉದ್ದೇಶಿಸಲಾಗಿದೆ. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಡಲಾಗುವುದು’

-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು

145 ಅಹವಾಲು ಸ್ವೀಕಾರ: ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಒಟ್ಟು 145 ಅರ್ಜಿಗಳು ಸಲ್ಲಿಕೆಯಾದವು.

ಜಿಲ್ಲೆಯ ವಿವಿಧ ಭಾಗಗಳಿಂದ ಅಹವಾಲು ಹೊತ್ತು ತಂದ ಸಾವಿರಾರು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸ್ವಯಂ-ಸೇವಕರು, ಮಹಿಳಾ ಮಂಡಳ ಗಳು ತಮ್ಮ ಸಮಸ್ಯೆಗಳ ಬಗೆಹರಿಸಲು ಅಹವಾಲುಗಳನ್ನು ಸಲ್ಲಿಸಿದರು. ಕೆಲವೊಂದು ಸಮಸ್ಯೆಗಳಿಗೆ ತಕ್ಷಣದಲ್ಲಿಯೇ ಸ್ಥಳೀಯವಾಗಿ ಬಗೆಹರಿಸಲಾಯಿತು. ಕೆಲವುಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಸೂಚಿಸಲಾಯಿತು.

ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಮಾಧವ ವಾಗ್ಲೆ ಅವರ ಜಾಗದ ಮೀಸಲು ಅರಣ್ಯ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವರು, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕ್ಲಿಫರ್ಡ್ ಲೋಬೋ ಇಂದೇ ಮಧ್ಯಾಹ್ನ ಸ್ಥಳ ಭೇಟಿ ಮಾಡಿ, ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿದರು. ಅದರನ್ವಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಸ್ಥಳ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಒಂದೂವರೆ ಗಂಟೆ ವಿಳಂಬ: ಆಕ್ರೋಶ

ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಜನತಾ ದರ್ಶನವು ಜನ ತುಂಬಿದ್ದರೂ ಒಂದೂವರೆ ಗಂಟೆ ವಿಳಂಬವಾಗಿ ಆರಂಭ ಗೊಂಡಿತು. ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗ್ಗೆ 11.50ಕ್ಕೆ ಹಾಲ್‌ಗೆ ಆಗಮಿಸಿರುವುದರಿಂದ ಕಾರ್ಯ ಕ್ರಮ ತಡವಾಗಿ ಪ್ರಾರಂಭಗೊಂಡಿತು.

145 ಅರ್ಜಿಗಳ ಪೈಕಿ ಶೇ.50 ಅರ್ಜಿಗಳನ್ನು ಖುದ್ಧು ತಾನೇ ಪರಿಶೀಲನೆ ನಡೆಸಿದ ಸಚಿವರು, ಬೆಂಗಳೂರಿಗೆ ಆಗಮಿಸಲು ಇದ್ದ ಕಾರಣ, ಆ ಜವಾಬ್ದಾರಿ ಯನ್ನು ಅಪರ ಜಿಲ್ಲಾಧಿಕಾರಿಗೆ ವಹಿಸಿ ತೆರಳಲು ಮುಂದಾದರು. ಈ ಬಗ್ಗೆ ಸಾರ್ವಜನಿಕರಲ್ಲೂ ವಿನಂತಿ ಮಾಡಿಕೊಂಡರು. ಆದರೆ ತಡವಾಗಿ ಬಂದು ಬೇಗ ಹೋದ ಸಚಿವರ ಬಗ್ಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ಆಕ್ರೋಶ ವನ್ನು ಸಚಿವರ ಮುಂದೆಯೇ ಪ್ರದರ್ಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News