ಕೋಟ: ಬೀದರ್ ಮೂಲದ ಮಹಿಳೆ ಕೊಲೆ ಪ್ರಕರಣ; ಉಡುಪಿಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು

Update: 2024-08-25 06:40 GMT

ಜಯಶ್ರೀ 

ಉಡುಪಿ, ಅ.25: ಸಾಲಿಗ್ರಾಮ ಸಮೀಪದ ಕಾರ್ಕಡ ಎಂಬಲ್ಲಿ ಆ.22 ರಂದು ತಡರಾತ್ರಿ ಪತ್ನಿ ಜಯಶ್ರೀ(31)ಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣದ ಆರೋಪಿ ಪತಿ ಕಿರಣ್ ಉಪಾಧ್ಯಾಯ(44)ನನ್ನು ಪೊಲೀಸರು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ಮನೆ ಹಾಗೂ ಇತರ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆಯನ್ನು ನಡೆಸಿದ್ದಾರೆ.

ಈ ಮಧ್ಯೆ ಬೀದರ್ ಮೂಲದ ಮೃತ ಜಯಶ್ರೀ ಅವರ ಮನೆಯವರು ಆಕೆಯ ಅಂತ್ಯಸಂಸ್ಕಾರವನ್ನು ಉಡುಪಿಯಲ್ಲಿಯೇ ರವಿವಾರ ನೆರವೇರಿಸಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವ ಪರೀಕ್ಷಾ ಕೇಂದ್ರದಲ್ಲಿ ಶವ ಮಹಜರು, ಮರಣೋತ್ತರ ಪರೀಕ್ಷೆ, ವಿಚಾರಣೆ, ಮೊದಲಾದ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಪೊಲೀಸರು, ಮೃತದೇಹವನ್ನು ಬೀದರಿನಿಂದ ಆಗಮಿಸಿದ ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದರು.

ಮೃತದೇಹವನ್ನು ದೂರದ ಬೀದರಿಗೆ ಕೊಂಡೊಯ್ಯಲು ಅಸಹಾಯಕ ಸ್ಥಿತಿ ಮೃತರ ಸಂಬಂಧಿಕರಿಗೆ ಎದುರಾಯಿತು. ಪ್ರಕರಣದ ತನಿಖಾಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಅವರ ಸಲಹೆ ಸ್ವೀಕರಿಸಿದ ಮೃತಳ ಕುಟುಂಬಸ್ಥರು ಉಡುಪಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಅದರಂತೆ ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಇಂದ್ರಾಳಿಯ ಹಿಂದೂ ರೂದ್ರಭೂಮಿ ಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ನೆರವಾದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News