ಕುಂದಾಪುರ: ದಿನಸಿ ಅಂಗಡಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಕುಂದಾಪುರ: ರಸ್ತೆ ಬದಿಯಲ್ಲಿದ್ದ ತಗಡು ಶೀಟಿನ ಸಣ್ಣ ದಿನಸಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾದ ಘಟನೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ನಡೆದಿದೆ.
ಅಂಬಿಕಾ ಮತ್ತು ಅವರ ಪತಿ ನಡೆಸುತ್ತಿದ್ದ ದಿನಸಿ ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್ ಡ್ರಿಂಕ್ಸ್, ತರಕಾರಿ ಇನ್ನಿತರ ಸಾಮಗ್ರಿಗಳಿದ್ದವು. ಅಂಗಡಿ ಮಾಲೀಕರು ರಾತ್ರಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.
ತಕ್ಷಣವೇ ಸ್ಥಳೀಯ ವ್ಯಕ್ತಿ ಅಂಗಡಿ ಮಾಲೀಕರಿಗೆ ಫೋನ್ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ. ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ. ಫ್ರಿಜ್, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.