ಬಾಹ್ಯಾಕಾಶ, ಚಂದ್ರಯಾನ 3ರ ಯಶಸ್ಸು ಕುರಿತು ಉಪನ್ಯಾಸ
ಶಿರ್ವ, ಸೆ.3: ಬಂಟಕಲ್ಲು ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾ ವಿದ್ಯಾ ಲಯದ ಐಎಸ್‌ಟಿ ಘಟಕವು ಐಇಇಇ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ಬಾಹ್ಯಕಾಶ ದಿನದ ಅಂಗವಾಗಿ ಅಸ್ತಿತ್ವದಲ್ಲಿರುವ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಚಂದ್ರಯಾನ 3ರ ಯಶಸ್ಸು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮೂಡುಬಿದ್ರೆಯ ಶ್ರೀಮಹಾವೀರ ಕಾಲೇಜಿನ ಖಗೋಳ ಶಾಸ್ತ್ರಜ್ಞರ ಕ್ಲಬ್‌ನ ಸಂಚಾಲಕ ಡಾ.ರಮೇಶ್ ಭಟ್, ಅಸ್ತಿತ್ವದಲ್ಲಿರುವ ಬಾಹ್ಯಾಕಾಶ ಕಾರ್ಯಾ ಚರಣೆಗಳು ಮತ್ತು ಚಂದ್ರಯಾನ- 3ರ ಯಶಸ್ವಿ ಉಡಾವಣೆ ಕುರಿತು ಮಾಹಿತಿ ನೀಡಿದರು. ಇವರು 2008ರಲ್ಲಿ ಕೈಗೊಂಡ ಚಂದ್ರಯಾನವು ಚಂದ್ರನ ಮೇಲಿರುವ ನೀರಿನ ಅಂಶವನ್ನು ಕಂಡುಹಿಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ ಎಂದರು.
ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್‌ಆರ್ಮ್ ಸ್ಟ್ರಾಂಗ್ ಸೇರಿದಂತೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಾಧನೆ ಮಾಡಿದವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಐಎಸ್‌ಟಿ ಘಟಕದ ಸಂಯೋಜಕ ಶಶಿಕಲಾ ಮತ್ತು ಐಇಇಇ ಘಟಕದ ಸಂಯೋಜಕ ಡಾ.ಸದಾನಂದ ಎಲ್. ಕಾರ್ಯಕ್ರಮ ಸಂಯೋಜಿಸಿದರು.