ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಾರಿ ತಪ್ಪಿಸುವ ಪ್ರಯತ್ನ: ಡಾ.ರವೀಂದ್ರನಾಥ ಶಾನುಭಾಗ್ ಖಂಡನೆ
ಉಡುಪಿ: ಕೇರಳದ ಪ್ಲಾಂಟೇಶನ್ ಕಾರ್ಪೊರೇಷನ್ ಗೋದಾಮು ಗಳಲ್ಲಿ ಉಳಿದಿದ್ದ ವಿಷಕಾರಕ ಕೀಟನಾಶಕ ಎಂಡೋ ಸಲ್ಫಾನ್‌ನ್ನು ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಕರ್ನಾಟಕದ ಗಡಿಭಾಗವಾದ ಕೇರಳದ ಮಿಂಚಿನಪದವು ಗುಡ್ಡಗಾಡು ಪ್ರದೇಶದ ಪಾಳುಬಾವಿಯಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ ಗೇರುತೋಟದಿಂದ ಸಂಗ್ರಹಿಸಿದ ಮಣ್ಣು ಮತ್ತು ನೀರಿನಲ್ಲಿ ಎಂಡೋಸಲ್ಫಾನ್ ಅಂಶ ಪತ್ತೆಯಾಗಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ ಎನ್ನಲಾದ ವರದಿಯನ್ನು ಈ ಪ್ರಕರಣದ ಪ್ರಾರಂಭದಿಂದಲೂ ಎಂಡೋ ಸಂತ್ರಸ್ಥರ ಪರವಾಗಿ ಹೋರಾಟ ನಡೆಸುತ್ತಾ ಬಂದಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಖಂಡಿಸಿದ್ದಾರೆ.
ಪ್ರಕರಣದ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆ ಎನ್ನಲಾದ ವರದಿಯ ಕುರಿತಂತೆ ಇತ್ತೀಚೆಗೆ ಪತ್ರಿಕೆ ಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ಇದು ಸಾರ್ವಜನಿಕರನ್ನು ದಾರಿತಪ್ಪಿಸುವ ಪ್ರಯತ್ನ ಹಾಗೂ ಬಾಲಿಶವಾದ ಹೇಳಿಕೆ ಎಂದು ಡಾ.ರವೀಂದ್ರನಾಥ್ ಇಂದು ಉಡುಪಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳದ ಮಿಂಚಿನಪದವು ಹಾಗೂ ಕರ್ನಾಟಕ ಗಡಿಭಾಗದ ನೆಟ್ಟಣಿಗೆಯ ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಎಂಡೋಸಲ್ಫಾನ್ ಅಂಶವಿದೆ ಹಾಗು ಇದರಿಂದಾಗಿ ಕೇರಳ-ಕರ್ನಾಟಕ ಗಡಿಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಾವು ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ (ಗ್ರೀನ್ ಟ್ರಿಬ್ಯೂನಲ್) ನೀಡಿದ್ದ ದೂರಿನಲ್ಲಿ ಹೇಳಿದ್ದೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಷ್ಠಾನದ ದೂರು ಏನು?: ಪ್ರತಿಷ್ಠಾನ ಹಸಿರು ನ್ಯಾಯಾಲಯದ ಮುಂದೆ ಸಲ್ಲಿಸಿದ ಫಿಟಿಶನ್‌ನ ಹೇಳಿದ್ದೇನೆಂದರೆ, ಗೇರು ಕಾರ್ಪೋರೇಷನಿನಲ್ಲಿ ಸಿಬ್ಬಂದಿ ಯಾಗಿದ್ದ ಅಚ್ಚುತ ಮಣಿಯಾಣಿ ಎಂಬವರು 2013ರಲ್ಲಿ ನಿವೃತ್ತರಾದಾಗ ಸುಮಾರು 600ಲೀ. ಎಂಡೋಸಲ್ಫಾನನ್ನು ಕೇರಳ- ಕರ್ನಾಟಕದ ಗಡಿಭಾಗದ ಮಿಂಚಿನಪದವು ಎಂಬಲ್ಲಿರುವ ಗೇರುತೋಟದ ಬಾವಿಗಳಲ್ಲಿ ಹೂಳಲಾಗಿತ್ತು ಎಂಬ ಮಾಹಿತಿ ನೀಡಿದ್ದರು. ಮಾತ್ರವಲ್ಲ, 2011ರಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತಾನೂ ಭಾಗವಹಿಸಿದ್ದೆ ಎಂಬ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಇದರ ಸತ್ಯಾಸತ್ಯತೆಯನ್ನು ಪರಾಮರ್ಶಿಸುವಂತೆ ಸರಕಾರಿ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ವಿನಂತಿಸಿದ್ದೆವು ಎಂದು ವಿವರಿಸಿದರು.
ಪಾಳುಬಾವಿಯಲ್ಲಿ ಎಂಡೋವನ್ನು ಹುಗಿದು ಅದರ ಮೇಲೆ ಹಾಕಿರುವ 30 ಅಡಿ ಮಣ್ಣನ್ನು ಹೊರತೆಗೆದು ಅದರ ಕೆಳಗೆ ಎಂಡೋಸಲ್ಫಾನ್ ತುಂಬಿದ ಕ್ಯಾನ್‌ಗಳಿವೆಯೇ ಎಂಬುದನ್ನು ಕಂಡುಕೊಳ್ಳುವಂತೆ ವಿನಂತಿಸಿದ್ದೆವು. ಆದರೆ ಇದನ್ನು ಖಚಿತ ಪಡಿಸುವ ಬದಲು ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಎಂಡೋಸಲ್ಫಾನ್ ಅಂಶವಿಲ್ಲ ಎಂದು ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡಿ ದೂರಿನಲ್ಲಿರುವ ಪ್ರಮುಖ ಅಂಶಗಳನ್ನು ವಿಷಯಾಂತರ ಮಾಡುವ ಹಾಗೂ ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಶಾನುಭಾಗ್ ಆರೋಪಿಸಿದರು.
ಪ್ರಕರಣದ ಹಿನ್ನಲೆ: 1980ರಿಂದ ಇಪ್ಪತ್ತು ವರ್ಷಗಳ ಕಾಲ ಕರ್ನಾಟಕ ಹಾಗೂ ಕೇರಳದ ಸರಕಾರಿ ಪ್ರಾಯೋಜಿತ ಪ್ಲಾಂಟೇಶನ್ ಕಾರ್ಪೋರೇಷನ್ ಗೇರು ತೋಟಗಳಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಸಿಂಪಡಿಸಲಾಗಿದ್ದ ಎಂಡೋಸಲ್ಫಾನ್ ಕೀಟನಾಶಕದ ವಿಷಕಾರಕ ಗುಣಗಳಿಂದಾಗಿ ಸುಮಾರು 12,000ಕ್ಕೂ ಅಧಿಕ ಮಕ್ಕಳು ಅಂಗವಿಕಲರಾಗಿದ್ದರು. ಈ ಪ್ರಕರಣದಲ್ಲಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹಾಗೂ ಇತರರು ಸುಪ್ರೀಂಕೋರ್ಟಿಗೆ ನೀಡಿದ ದೂರು ಅರ್ಜಿಯನ್ನು ಅನುಸರಿಸಿ 2011ರ ಮೇ 13ರಂದು ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ಇಡೀ ದೇಶದಲ್ಲಿ ಎಂಡೋ ಸಲ್ಫಾನಿನ ಉಪಯೋಗ ಹಾಗು ಮಾರಾಟವನ್ನು ನಿಷೇಧಿಸಿತ್ತು. ಅಲ್ಲದೇ ಗೇರುತೋಟಗಳ ಗೋದಾಮುಗಳಲ್ಲಿ ಉಳಿದಿ ರುವ ಎಂಡೋಸಲ್ಫಾನಿನ ದಾಸ್ತಾನುಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲು ಆದೇಶ ನೀಡಿತ್ತು.
ಸ್ಥಗಿತಗೊಂಡ ಕಾರ್ಯಾಚರಣೆ: ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಪ್ಲಾಂಟೇಶನ್ ಕಾರ್ಪೋರೇಷನಿನ ಗೋದಾಮುಗಳಲ್ಲಿ ಉಳಿದಿದ್ದ ಎಂಡೋಸಲ್ಫಾನನ್ನು ನಾಶಪಡಿಸಲು ರಾಸಾಯನಿಕತಜ್ಞರು ಬಂದಾಗ ಸ್ಥಳೀಯರಿಂದ ಬಂದ ವಿರೋಧದಿಂದಾಗಿ ನಾಶಪಡಿಸುವ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಲಾಗಿತ್ತು. ಅನಂತರದ ದಿನಗಳಲ್ಲಿ ಈ ಕೀಟನಾಶಕದ ದಾಸ್ತಾನನ್ನು ಏನು ಮಾಡಲಾಯಿತು ಎಂಬ ವಿಚಾರ ಸಾರ್ವಜನಿಕರಿಗೆ ತಿಳಿಯಲೇ ಇಲ್ಲ. ಜನರೂ ಈ ವಿಷಯವನ್ನು ಮರೆತು ಬಿಟ್ಟರು ಎಂದರು.
ಮಣಯಾಣಿ ನೀಡಿದ ಸುಳಿವು: ಈ ವಿಷಯಕ್ಕೆ ಮರು ಜೀವ ಬಂದಿದ್ದು 2013ರಲ್ಲಿ. ಗೇರು ಕಾರ್ಪೋರೇಷನಿನ ಸಿಬ್ಬಂದಿ ಯಾಗಿದ್ದ ಅಚ್ಚುತ ಮಣಿಯಾಣಿ ಸೇವೆಯಿಂದ ನಿವೃತ್ತರಾಗುವ ವೇಳೆ ಉಳಿದ ಎಂಡೋಸಲ್ಫಾನ ನ್ನು ಮಿಂಚಿನಪದವು ಗೇರುತೋಟದ ಪಾಳುಬಾವಿಯಲ್ಲಿ ಹೂಳಲಾಗಿದೆ ಎಂದು ನೀಡಿದ ಮಾಹಿತಿಯ ಆಧಾರದಲ್ಲಿ ಪ್ರತಿಷ್ಠಾನ, ಪ್ರಕರಣದ ಕುರಿತು ಸಮಗ್ರ ಸಮೀಕ್ಷೆಯ ನಡೆಸಿ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಡಳಿತಕ್ಕೆ ಮಾಡಿದ ಸತತ ಮನವಿ ವಿಫಲವಾಗಿ 10ವರ್ಷವಾದರೂ ಸಮಸ್ಯೆ ಬಗೆಹರಿಯದಾಗ, ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ವಿನಂತಿಸಲಾಯಿತು ಎಂದು ಡಾ. ಶಾನುಭಾಗ್ ವಿವರಿಸಿದರು.
ಪ್ರತಿಷ್ಠಾನದ ದೂರು ಅರ್ಜಿಯನ್ನು ಸ್ವೀಕರಿಸಿದ ನ್ಯಾಯಮಂಡಳಿ ಅಕ್ರಮವಾಗಿ ಹೂಳಲಾಗಿದ್ದ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಭಾರತ ಒಕ್ಕೂಟ, ಕರ್ನಾಟಕ ಹಾಗೂ ಕೇರಳ ಸರಕಾರ, ಕರ್ನಾಟಕ ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತ್ತು ಎಂದು ವಿವರಿಸಿದರು.
ಮುಂದಿನ ತಿಂಗಳ 2ನೇ ತಾರೀಕಿನಂದು ಚೆನ್ನೈನ ಹಸಿರು ಪೀಠದ ಮುಂದೆ ವಿಚಾರಣೆ ನಡೆಯಲಿದ್ದು, ಈ ಎಲ್ಲಾ ವಿಚಾರಗಳನ್ನು ತಾವು ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರುವುದಾಗಿ ಡಾ.ಶಾನುಭಾಗ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಅನುರಾಗ್ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ಅನಿಲ್ ದೇವಾಡಿಗ ಉಪಸ್ಥಿತರಿದ್ದರು.
ತನಿಖೆ ಬದಲು ತಿಪ್ಪೆ ಸಾರಿಸುವ ಪ್ರಯತ್ನ
ಎಂಡೋಸಲ್ಫಾನ್ ಹೊಂದಿದ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಗೇರುತೋಟದ ಬಾವಿಗಳಲ್ಲಿ ಹೂತಿಟ್ಟು ಅದರಮೇಲೆ 30 ಅಡಿಗಳಷ್ಟು ತುಂಬಿಸಲಾಗಿದ್ದ ಮಣ್ಣನ್ನು ಹೊರತೆಗೆದು ಪಾಳುಬಾವಿಯಲ್ಲಿ ಎಂಡೋಸಲ್ಫಾನ್ ಇವೆಯೇ ಎಂಬುದನ್ನು ಖಚಿತ ಪಡಿಸುವ ಬದಲು ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಘಟನೆ ನಡೆದು 12 ವರ್ಷಗಳ ನಂತರ ಮೇಲ್ಪದರ ದಲ್ಲಿರುವ ಮಣ್ಣಿನ ಹಾಗೂ ನೀರಿನ ಸ್ಯಾಂಪಲ್‌ಗಳನ್ನು ಪರಿಶೀಲಿಸಿ ಇವುಗಳಲ್ಲಿ ಎಂಡೋಸಲ್ಫಾನ್ ಅಂಶವಿಲ್ಲ ಎಂಬ ವರದಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎನ್ನುವ ಪತ್ರಿಕಾ ಪ್ರಕಟಣೆ, ದೂರಿನ ಪ್ರಮುಖ ಅಂಶಗಳನ್ನು ವಿಷಯಾಂತರ ಮಾಡುವ ಹಾಗೂ ಸಾರ್ವಜನಿಕರನ್ನು ದಾರಿತಪ್ಪಿಸುವ ಪ್ರಯತ್ನವೆನಿಸುತ್ತಿದೆ ಎಂದು ಡಾ.ಶಾನುಭಾಗ್ ಅಭಿಪ್ರಾಯ ಪಟ್ಟರು.
ಮಾತ್ರವಲ್ಲ, ತಮ್ಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವುದು ನ್ಯಾಯ ಸಮ್ಮತವೂ ಅಲ್ಲ. ಈ ಮೂಲಕ ಮಂಡಳಿಯು ವರದಿಯ ಒಂದು ಪ್ರತಿಯನ್ನು ನನಗೆ ನೀಡುವ ಅವಕಾಶದಿಂದ ದೂರುದಾರನಾದ ನನ್ನನ್ನು ವಂಚಿಸಿದೆ ಎಂದು ಡಾ.ಶಾನುಭಾಗ್ ಆರೋಪಿಸಿದರು.
ನೆಟ್ಟಣಿಗೆ ಗ್ರಾಮದ 113 ಮಂದಿ ನತದೃಷ್ಟರು
ಕೇರಳಕ್ಕೆ ಸೇರಿದ ಎತ್ತರದ ಗುಡ್ಡ ಪ್ರದೇಶವಾದ ಮಿಂಚನಪದವು ಗ್ರಾಮದ ಗೇರುತೋಟದಲ್ಲಿ ಎಂಡೋ ಸಲ್ಫಾನ್ ಹುಗಿ ದಿದ್ದು, ಅದರ ಕೆಳಗಿರುವ ಕರ್ನಾಟಕದ ಗಡಿ ಗ್ರಾಮವಾದ ಪುತ್ತೂರು ತಾಲೂಕಿನ ನೆಟ್ಟಣಿಗೆ ಗ್ರಾಮದಲ್ಲಿ 113 ಮಂದಿ ಎಂಡೋ ಪೀಡಿತರು ಪತ್ತೆಯಾಗಿದ್ದರು. ಈ ಗ್ರಾಮದ ಆಸುಪಾಸು ಎಂಡೋ ಸಿಂಪಡಣೆ ನಡೆದಿರಲಿಲ್ಲ. ಹಾಗಿದ್ದರೆ ಮಳೆಗಾಲ ದಲ್ಲಿ ನೀರಿನ ಮೂಲಕ ಎಂಡೋ ಹರಿದುಬಂದು ಗ್ರಾಮಸ್ಥರಿಗೆ ಈ ಕಾಯಿಲೆ ಬಂದಿರಬೇಕು ಎಂಬುದು ತಜ್ಞರ ಅಭಿಪ್ರಾಯ ಎಂದು ಡಾ.ಶಾನುಭಾಗ್ ತಿಳಿಸಿದರು.
ಈ ಬಗ್ಗೆ ವರದಿ ನೀಡಿದ್ದ ಅಂದಿನ ಪುತ್ತೂರು ಎಸಿ ಕೆ.ವಿ.ರಾಜೇಂದ್ರ ಅವರು ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿ ನೆಟ್ಟಣಿಗೆ ಗ್ರಾಮದ ಬಳಿಯ ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಕ್ಯಾನ್‌ಗಳನ್ನು ಹಾಕಿರುವುದು ನಿಜವಾದಲ್ಲಿ ಅದು ‘ಸ್ಫೋಟ ಗೊಳ್ಳುವ ಬಾಂಬ್‌ನಂತೆ’ ಎಂದು ಹೇಳಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಉತ್ಖನನ ಮಾಡದಿದ್ದಲ್ಲಿ ಏನಾದೀತು?
ಕಾಲಸಂದಂತೆಲ್ಲಾ ಎಂಡೋಸಲ್ಫಾನ್ ರಾಸಾಯನಿಕ ಹಲವಾರು ವಿಧಗಳಲ್ಲಿ ರೂಪಾಂತರ ಗೊಳ್ಳುತ್ತದೆ. ಆದರಲ್ಲಿ ಎಂಡೋ ಸಲ್ಫಾನ್ ಸಲ್ಫೇಟ್ ಎಂಬುದು ಮೂಲ ಎಂಡೋಸಲ್ಫಾನ್‌ಗಿಂತಲೂ ಹಲವು ಪಟ್ಟುವಿಷಕಾರಿ- ಮಾತ್ರವಲ್ಲ ಅಧಿಕ ಕಾಲ ಮಣ್ಣಿನಲ್ಲಿ ಉಳಿಯುವಂತದ್ದು. ಈ ವಿಚಾರವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯೇ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತಮ್ಮ ವರದಿಯಲ್ಲಿ ವಿವರಿಸಿದೆ. ಇಷ್ಟೆಲ್ಲ ವಿವರಗಳನ್ನು ದೂರು ಅರ್ಜಿಯಲ್ಲಿ ಹೇಳಲಾಗಿದ್ದರೂ ಆ ವಿಚಾರಗಳಲ್ಲಿ ಯಾವುದೇ ಕಾರ್ಯಾಚರಣೆ ನಡೆಸದೆ ಕೇವಲ ಮಣ್ಣಿನಲ್ಲಿ ಎಂಡೋಸಲ್ಫಾನಿನ ಅಂಶ ಈಗಿಲ್ಲ ಎಂದು ಪತ್ರಿಕೆಗಳಲ್ಲಿ ಹೇಳಿರುವುದನ್ನು ಡಾ.ಶಾನುಭಾಗ್ ಖಂಡಿಸಿದ್ದಾರೆ.