ಮಹಿಷ ಈ ದೇಶದ ದ್ರಾವಿಡ ಜನಾಂಗದ ಅಸ್ಮಿತೆ: ಡಾ.ವಿಠ್ಠಲ್ ವಗ್ಗನ್
ಉಡುಪಿ: ಈ ದೇಶದಲ್ಲಿ ಮಹಿಷನ ಹೆಸರಿನಲ್ಲಿ ಹತ್ತಾರು ಮಂದಿರ, ಐದಾರು ಜಿಲ್ಲೆ ಹಾಗೂ ನೂರಾರು ಗ್ರಾಮಗಳಿವೆ. ಇವು ಮಹಿಷ ಪರಾಕ್ರಮಿ, ಉತ್ತಮ ಗುಣನಡತೆಯ ವ್ಯಕ್ತಿ ಎಂಬುದನ್ನು ತೋರಿಸುತ್ತದೆ. ಮಹಿಷ ಈ ದೇಶದ ದ್ರಾವಿಡ ಜನಾಂಗದ ಅಸ್ಮಿತೆ ಎಂಬುದು ದಾಖಲೆಗಳಿಂದ ಸಾಬೀತು ಆಗುತ್ತದೆ. ಮಹಿಷಾಸುರ ಪೌರಾಣಿಕ ಹಾಗೂ ಚಾರಿತ್ರೀಕ ವ್ಯಕ್ತಿಯೇ ಹೊರತು ಕಾಲ್ಪನಿಕ ವ್ಯಕ್ತಿ ಅಲ್ಲ ಎಂದು ಸಂಶೋಧನಾ ಬರಹಗಾರ ಡಾ.ವಿಠ್ಠಲ್ ವಗ್ಗನ್ ಕಲಬುರಗಿ ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿ ಸಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷೋತ್ಸವ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹಿಷ ದಸರಾ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಂಸ್ಕೃತಿಕ ದಂಗೆಯ ಪ್ರತಿರೋಧದ ಹಬ್ಬವಾಗಿದೆ. ದೇವರ ಹೆಸರಿನಲ್ಲಿ ಮೂಲ ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡು ಶೋಷಣೆ ಮಾಡಲಾಗುತ್ತಿದೆ. ಆದುದರಿಂದ ಮೊದಲು ನಾವು ಈ ಮಾನಸಿಕ ಗುಲಾಮಗಿರಿಯಿಂದ ಹೊರ ಬರಬೇಕು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ವೈಜ್ಞಾನಿಕವಾಗಿ ವಿಚಾರಗಳನ್ನು ಮಂಡಿಸಿದರೆ ನಮ್ಮ ಮೇಲೆ ಎಫ್‌ಐಆರ್ ಮಾಡಲಾಗುತ್ತದೆ ಎಂದು ಅವರು ಟೀಕಿಸಿದರು.
ಭಾರತದಲ್ಲಿರುವ ರಾಜಕೀಯ ಸಂವಿಧಾನ ಮೇಲೆ ಸಾಂಸ್ಕೃತಿಕ ವಸಾಹತು ಶಾಹಿ ಸಂವಿಧಾನವು ದೌರ್ಜನ್ಯ ಪೂರ್ವಕ ವಾಗಿ ಆಳ್ವಿಕೆ ಮಾಡುತ್ತಿದೆ. ಅದರ ಪರಿಣಾಮ ನಾವು ಸಂವಿಧಾನ ಪ್ರಕಾರ ನಡೆದರೆ, ಅವರು ವಾಮ ಮಾರ್ಗದ ಮೂಲಕ ನಂಬಿಕೆ ಹೆಸರಿನಲ್ಲಿ ಅವಕಾಶ ನಿರಾಕರಿಸುತ್ತಾರೆ. ಸಂವಿಧಾನ, ಕಾನೂನು ಇರುವುದು ಆಧಾರ, ಸಾಕ್ಷಿಗಳ ಮೇಲೆಯೇ ಹೊರತು ಭಾವನೆ, ನಂಬಿಕೆ ಮೇಲೆ ಅಲ್ಲ. ಭಾವನೆಗಿಂತಲೂ ಶಾಸನ ಸುಪ್ರೀಂ ಆಗಿದೆ. ಆದುದರಿಂದ ನಮ್ಮ ಜನಾಂಗ ಆ ಬಂಧನದಿಂದ ಹೊರ ಬರುವ ಕೆಲಸ ಮಾಡಬೇಕೆಂದರು.
ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ಈ ದೇಶಕ್ಕೆ ವಲಸೆ ಬಂದ ಆರ್ಯರು ಮೊಟ್ಟ ಮೊದಲು ಇಲ್ಲಿನ ದ್ರಾವಿಡ ಸಂಸ್ಕೃತಿಯನ್ನು ನಾಶ ಮಾಡಿದರು. ಒಂದು ಜನಾಂಗದ ಸಂಸ್ಕೃತಿಯ ಬೇರನ್ನು ನಾಶ ಮಾಡಿದರೆ ಇಡೀ ಜನಾಂಗವೇ ನಾಶ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ವೈದಿಕರು, ಇಲ್ಲಿನ ಮೂಲ ನಿವಾಸಿಗಳ ಪ್ರಕೃತಿಯ ಆರಾಧನೆ ಶಕ್ತಿಯನ್ನು ಧ್ರುವಿಕರಿಸಿ ದೇವರನ್ನು ತಲೆಗೆ ತುಂಬಿಸಿದರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ಮಾತನಾಡಿದರು. ಅಂಬೇಡ್ಕರ್ ಯುವಸೇನೆ ಉಡುಪಿ ತಾಲೂಕು ಅಧ್ಯಕ್ಷ ದಯಾನಂದ ಕಪ್ಪೆಟ್ಟು, ದಸಂಸ ಮುಖಂಡ ಶೇಖರ್ ಹೆಜ್ಮಾಡಿ ಉಪಸ್ಥಿತರಿದ್ದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಗೀತಾ ಸ್ವಾಗತಿಸಿದರು. ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ ವಂದಿಸಿದರು. ದಲಿತ ಮುಖಂಡ ದಯಾಕರ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.
‘ಚರಿತ್ರೆಯ ಪುನರ್ ವ್ಯಾಖ್ಯಾನ ಅಗತ್ಯ’
ನಮ್ಮ ಮಹಾಪುರುಷರನ್ನು ಶೋಷಣೆ ಮಾಡಿ ಹತ್ಯೆ ಮಾಡಲಾಗಿದೆ. ಅವರು ಯಾರು ಕೂಡ ಕ್ರೂರಿಗಳಲ್ಲ. ಈ ದೇಶದಲ್ಲಿ ಕಾಲ್ಪನಿಕ ಕಥೆಗಳನ್ನು ಕಟ್ಟುವ ಮೂಲಕ ಕೆಟ್ಟವರನ್ನು ದೇವರು ಎಂದು ಪೂಜೆ ಮಾಡಲಾಗುತ್ತದೆ. ಆದರೆ ಮೂಲ ಭಾರತೀಯ ಜನಾಂಗ ಮತ್ತು ಪರಿಸರವನ್ನು ಸಂರಕ್ಷಣೆ ಮಾಡಿದವರನ್ನು ಕ್ರೂರಿ ಎಂಬುದಾಗಿ ಬಿಂಬಿಸಲಾಗುತ್ತದೆ. ಆದುದರಿಂದ ಚರಿತ್ರೆಯ ಪುನರ್ ವ್ಯಾಖ್ಯಾನ ಮಾಡುವ ಕೆಲಸ ಚಳವಳಿಗಾರರು ಹಾಗೂ ಹೋರಾಟಗಾರರ ಜವಾಬ್ದಾರಿಯಾಗಿದೆ ಎಂದು ಡಾ.ವಿಠ್ಠಲ್ ವಗ್ಗನ್ ಅಭಿಪ್ರಾಯಪಟ್ಟರು.
‘ಈ ದೇಶದಲ್ಲಿ ಎಮ್ಮೆ ಹಾಲು ಕುಡಿದು ಕೋಣಗಳಿಂದ ಬೇಸಾಯ ಮಾಡುತ್ತಿದ್ದವರು ಆದಿ ದ್ರಾವಿಡರು. ಆದಿದ್ರಾವಿಡರ ಬೇಸಾಯದ ಕೋಣ ಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಮನುವಾದಿಗಳು ದೇವರಿಗೆ ಕೋಣ ಬಲಿ ಕೊಡುವ ಪದ್ಧತಿ ಆರಂಭಿಸಿದರು. ಇದು ಮಹಿಷ ಜನಾಂಗವನ್ನು ಆರ್ಥಿಕ ವಾಗಿ ದುರ್ಬಲರನ್ನಾಗಿ ಮಾಡುವ ಹುನ್ನಾರವಾಗಿದೆ’
-ಡಾ.ವಿಠ್ಠಲ್ ವಗ್ಗನ್, ಸಂಶೋಧನಾ ಬರಹಗಾರರು
ಬಹಿರಂಗ ಚರ್ಚೆಗೆ ಆಹ್ವಾನ: ರಕ್ಷಸ ಮನಸ್ಥಿತಿಯವರು ಮಾತ್ರ ರಕ್ಷಸರನ್ನು ಆರಾಧನೆ ಮಾಡುತ್ತಾರೆ ಎಂಬ ಹೇಳಿಕೆ ನೀಡಿ ರುವ ಚಕ್ರವರ್ತಿ ಸೂಲಿಬೆಲೆಗೆ ಈ ವಿಚಾರದ ಕುರಿತು ಬಹಿರಂಗ ವಾಗಿ ಚರ್ಚೆ ಮಾಡಲು ಡಾ.ವಿಠ್ಠಲ್ ವಗ್ಗನ್ ಆಹ್ವಾನ ನೀಡಿದರು.
ಸೂಲಿಬೆಲೆಗೆ ಅವರ ಧಾರ್ಮಿಕ ಗ್ರಂಥವೇ ಗೊತ್ತಿಲ್ಲ. ತಾಕತ್ತಿದ್ದರೆ ಅವರು ನಾಲ್ಕು ವೇದ, 18 ಪುರಾಣ ಹಾಗೂ ಸ್ಮತಿಗಳ ಕುರಿತು ಚರ್ಚೆ ಬರಲಿ ಎಂದು ಅವರು ಸವಾಲು ಹಾಕಿದರು. ವಾಲ್ಮಿಕಿ ಬರೆದ ರಾಮಾಯಣದಲ್ಲಿ ರಕ್ಷಕರು ಅಂದರೆ ರಕ್ಷಣೆ ಮಾಡುವ ಸಂರಕ್ಷಕರು ಎಂಬುದಿದೆ. ಮೊದಲು ಇವರು ಅದನ್ನು ಓದಿ ತಿಳಿದುಕೊಳ್ಳಲಿ ಎಂದರು.
ಆವರಣದೊಳಗೆಯೇ ಮಹಿಷೋತ್ಸವ ಮೆರವಣಿಗೆ
ಮಹಿಷ ದಸರಾ ಆಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿ ಮೆರವಣಿಗೆ ಹಾಗೂ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿದ್ದು, ಆ ಕಾರಣಕ್ಕಾಗಿ ಸಂಘಟಕರು ಅಂಬೇಡ್ಕರ್ ಭವನದ ಆವರಣ ದೊಳಗೆಯೇ ಮಹಿಷೋತ್ಸವ ಮೆರವಣಿಗೆ ನಡೆಸಿದರು.
ಮಹಿಷ ಕಟೌಟ್‌ಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಸಂಶೋಧನಾ ಬರಹಗಾರ ವಿಠಲ್ ವಗ್ಗನ್ ಚಾಲನೆ ನೀಡಿದರು. ಅಲ್ಲಿಂದ ಮೆರವಣಿಗೆ ಮೂಲಕ ಸಭಾಂಗಣದೊಳಗೆ ಬರಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಅಲ್ಲದೆ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.