ಉಡುಪಿ: ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ನಿವಾರಣೆಗೆ ಒಪ್ಪಂದ

ಉಡುಪಿ: ಜಿಲ್ಲೆಯಾದ್ಯಂತ ಮಕ್ಕಳಲ್ಲಿರುವ ಪೌಷ್ಠಿಕಾಂಶದ ಕೊರತೆಯನ್ನು ನಿವಾರಿಸುವ ಸಲುವಾಗಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮತ್ತು ಸಾಧಾರಣ ಅಪೌಷ್ಠಿಕತೆ ಇರುವ ಮಕ್ಕಳ ಪ್ರಮಾಣ ವನ್ನು ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿ ಮತ್ತು ಮಂಗಳೂರಿನ ಸಿ.ಎಚ್.ಡಿ ಗ್ರೂಪ್ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಒಡಂಬಡಿಕೆಗೆ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಮತ್ತು ಸಿಹೆಚ್‌ಡಿ ಗ್ರೂಪ್‌ನ ಸ್ಥಾಪಕ ಸಿಇಓ ಡಾ.ಎಡ್ಮಂಡ್ ಫೆರ್ನಾಂಡೀಸ್ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಜಿ.ಭಟ್, ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅಪೌಷ್ಠಿಕತೆಯನ್ನು ದೂರ ಮಾಡುವ ಪ್ರಕ್ರಿಯೆ ಇದೇ ಎಪ್ರಿಲ್ ೦೧ರಿಂದ ಪ್ರಾರಂಭಗೊಳ್ಳಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.