ಉಡುಪಿ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ| ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಅನಾಥೆ; ಕನ್ಯಾದಾನ ಮಾಡಿದ ಜಿಲ್ಲಾಧಿಕಾರಿ

Update: 2024-08-23 14:53 GMT

ಉಡುಪಿ: 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರಿಗೆ ಇಂದು ಕಂಕಣ ಭಾಗ್ಯ ಒಲಿದುಬಂದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ ಗಳು, ಗಣ್ಯರು ಹಾಗೂ ಮಹಿಳಾ ನಿಲಯದ ಸಹ ನಿವಾಸಿನಿಯರ ಸಮ್ಮುಖದಲ್ಲಿ ಖುಷ್ಬು ಸುಮೇರಾ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ರಾಜಸ್ತಾನದ ಜೋದ್‌ಪುರದವರೆನ್ನಲಾದ ಖುಷ್ಬು ಸುಮೇರಾ ಅನಾಥೆಯಾಗಿ ಆರು ವರ್ಷ ಪ್ರಾಯದಲ್ಲಿ ಬಾಲಕಿಯರ ಬಾಲ ಮಂದಿರ ಸೇರಿದ್ದು, ಕಳೆದ ಮೂರು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಾಗಿದ್ದಾರೆ. ಅವರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ. ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ. (29) ಸಂಪ್ರದಾಯ ರೀತಿಯಲ್ಲಿ ವಿವಾಹವಾದರು.

ನಿಟ್ಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ ನಿಂತು ಶಾಸ್ತ್ರೋಸ್ತ್ರ ವಾಗಿ ಕನ್ಯಾದಾನ ಮಾಡಿದರು.

ಕಳೆದ ಜನವರಿ-ಫೆಬ್ರವರಿ ತಿಂಗಳಿನಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಾಹ ಸಂಬಂಧಿ ಮಾತುಕತೆಗಳು ಆರಂಭ ಗೊಂಡಿದ್ದವು ಎಂದು ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ತಿಳಿಸಿದರು. ಈ ವೇಳೆ ವಧು-ವರರ ಪರಸ್ಪರ ಸಮ್ಮತಿ, ಇಬ್ಬರ ಆರೋಗ್ಯ ಪರೀಕ್ಷೆ, ವರನ ಕುಟುಂಬದ ಹಿನ್ನೆಲೆ, ಆದಾಯದ ಪರಿಶೀಲನೆಗಳನ್ನು ನಡೆಸಲಾಗಿತ್ತು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರಿವೀಕ್ಷಣಾಧಿಕಾರಿಯಿಂದ ಗೃಹ ತನಿಖೆಯನ್ನು ಕೂಡ ನಡೆಸಲಾಗಿತ್ತು. ಎಲ್ಲಾ ವಿವರಗಳನ್ನು ಕಲೆ ಹಾಕಿದ ಬಳಿಕವೇ ಜಿಲ್ಲಾಡಳಿತ ಈ ವಿವಾಹಕ್ಕೆ ಒಪ್ಪಿಗೆ ಸೂಚಿಸಿದೆ ಎಂದವರು ಹೇಳಿದರು.

ವಿವಾಹಕ್ಕಾಗಿ ಮಹಿಳಾ ನಿಲಯವನ್ನು ತಳಿರುತೋರಣ, ರಂಗೋಲಿಯಿಂದ ಅಲಂಕರಿಸಲಾಗಿತ್ತು. ಮದುವೆ ಚಪ್ಪರ, ಸ್ವಾಗತ ದ್ವಾರ ನಿರ್ಮಿಸಲಾಗಿತ್ತು. ಆಮಂತ್ರಿತರಿಗೆ ತಂಪು ಪಾನೀಯ ಹಾಗೂ ಗುಲಾಬಿ ಹೂ ನೀಡುವು ದರೊಂದಿಗೆ ಸ್ವಾಗತಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕುಟುಂಬದ ಮದುವೆ ಯಂತೆಯೇ ನಗುಮುಖದೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಅರ್ಚಕರು ಶಾಸ್ತ್ರೋಸ್ತ್ರವಾಗಿ ಅಗ್ನಿ ಸಾಕ್ಷಿಯಾಗಿ ಮದುವೆ ಕಾರ್ಯವನ್ನು ನೆರವೇರಿಸಿದರು. ಬಂದವರಿಗೆಲ್ಲಾ ಸಿಹಿಭೋಜನದ ವ್ಯವಸ್ಥೆ ಇತ್ತು.

ಈ ಶುಭ ಸಂದರ್ಭ ನವ ಜೋಡಿಗೆ ಎಎಸ್ಪಿ ಟಿ.ಸಿದ್ಧಲಿಂಗಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ,ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ನೂರಾರು ಮಂದಿ ಆಶೀರ್ವದಿಸಿದರು.ಆಮಂತ್ರಿತರು ವಧು-ವರರಿಗೆ ಉಡುಗೊರೆಗಳನ್ನು ನೀಡಿ ಹರಸಿದರು.

3 ವರ್ಷದವರೆಗೆ ಇಲಾಖೆ ನಿಗಾ

ತೀರ್ಥಹಳ್ಳಿ ಅಂಬುತೀರ್ಥದ ಮಧುರಾಜ್ ಎ.ಡಿ. ಪದವೀಧರರಾಗಿದ್ದು ತಂದೆಯೊಂದಿಗೆ ಕೇಟರಿಂಗ್ ಉದ್ಯಮ ನಡೆಸುತಿ ದ್ದಾರೆ. ಸಾಕಷ್ಟು ಕೃಷಿಯನ್ನೂ ಹೊಂದಿರುವ ಇವರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಅವರ ಹಿನ್ನೆಲೆಯನ್ನು ಪರಿಶೀಲಿಸಿ ಮದುವೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸರಕಾರದಿಂದ ಸ್ಟೇಟ್‌ಹೋಮ್ ನಿವಾಸಿನಿಯರ ವಿವಾಹ ಸಂದರ್ಭದಲ್ಲಿ 20,000ರೂ.ಗಳನ್ನು ಜೀವನ ನಿರ್ವಹಣೆಗೆ ನೀಡಲಾಗುತ್ತದೆ. ಇದರಲ್ಲಿ 5000ರೂ. ಮದುವೆ ಖರ್ಚಿಗೆ ಹಾಗೂ ಉಳಿದ 15,000ರೂ.ಗಳನ್ನು ಆಕೆಯ ಹೆಸರಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಲಾಗುತ್ತದೆ. ಮೂರು ವರ್ಷಗಳ ಬಳಿಕ ಅದನ್ನು ಆಕೆ ಬಳಸಿಕೊಳ್ಳಬಹುದು ಎಂದು ಪುಷ್ಪಾರಾಣಿ ತಿಳಿಸಿದರು.

ಮುಂದಿನ ಮೂರು ವರ್ಷಗಳ ಕಾಲ ಇವರು ಇಲಾಖೆಯ ನಿಗಾದಲ್ಲಿ ರುತ್ತಾರೆ.ಪ್ರತಿ ಮೂರು ತಿಂಗಳಿಗೊಮ್ಮೆ ಆಕೆಯ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಲಾಗುತ್ತದೆ ಎಂದರು. ಖುಷ್ಬು ಸುಮೇರಾ ಅವರು ಕಾರವಾರ ಬಾಲಮಂದಿರದಿಂದ ಇಲ್ಲಿಗೆ ಬಂದು ಇಲ್ಲೇ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಕಳೆದ ಆರು ತಿಂಗಳಿನಿಂದ ಮಕ್ಕಳ ರಕ್ಷಣಾ ಪಡೆಯಲ್ಲಿ ಉದ್ಯೋಗಿ ಯಾಗಿದ್ದಾರೆ ಎಂದು ಪುಷ್ಪಾರಾಣಿ ತಿಳಿಸಿದರು.

"ರಾಜ್ಯ ಮಹಿಳಾ ನಿಲಯದಲ್ಲಿ ವಾಸವಾಗಿರುವ ಹೆಣ್ಣು ಮಕ್ಕಳನ್ನು ವಿವಾಹ ವಾಗಲು ಸಾಕಷ್ಟು ಪ್ರಸ್ತಾಪಗಳು ಬರುತ್ತಿವೆ. ಆದರೆ ನಾವು ವಯಸ್ಸು, ಆರ್ಥಿಕ ಸ್ಥಿತಿಗತಿ ಸೇರಿದಂತೆ ಸಾಕಷ್ಟು ಅಂಶಗಳನ್ನು ಪರಿಶೀಲಿಸಿ ಮುಂದುವರಿ ಯುತ್ತೇವೆ. ಹುಡುಗ ಹಾಗೂ ಹುಡುಗಿಯ ಪರಸ್ಪರ ಒಪ್ಪಿಗೆಯೂ ಬೇಕಾಗುತ್ತದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮದುವೆ ಯನ್ನು ಶಾಸ್ತ್ರೋತ್ಸವವಾಗಿ ನೆರವೇರಿಸಿದ್ದೇವೆ. ಈ ವಿವಾಹ ಕಾರ್ಯಕ್ಕೆ ಸರಕಾರದಿಂದ ನೀಡಲಾದ ಅನುದಾನದಲ್ಲಿ 15ಸಾವಿರ ರೂ.ವನ್ನು ಸುಮೇರಾ ಹೆಸರಿನಲ್ಲಿ ಠೇವಣಿ ಇಡಲಾಗುವುದು. ಇಂದಿನ ಮದುವೆ ಕಾರ್ಯಕ್ಕೆ ಸಾಕಷ್ಟು ದಾನಿಗಳು ನೆರವು ನೀಡಿದ್ದಾರೆ".

-ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ.

"ಉಡುಪಿಯ ರಾಜ್ಯ ಮಹಿಳಾ ನಿಲಯವು 1976ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಇಲ್ಲಿ ನಡೆದಿರುವುದು 25ನೇ ವಿವಾಹ ಸಮಾರಂಭ ವಾಗಿದೆ. ಪ್ರಸ್ತುತ ಇಲ್ಲಿ 66 ಮಂದಿ ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದಾರೆ. ಇವರಲ್ಲಿ 35ಕ್ಕೂ ಅಧಿಕ ಮಂದಿ ಹೊರ ರಾಜ್ಯದವರು. 45 ವರ್ಷ ಪ್ರಾಯ ಮೀರಿದವರು ಹೆಚ್ಚಿದ್ದಾರೆ. ಕೆಲವು ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣ ಪಡೆಯುತಿದ್ದಾರೆ".

-ಪುಷ್ಪಾರಾಣಿ, ಅಧೀಕ್ಷಕರು, ರಾಜ್ಯ ಮಹಿಳಾ ನಿಲಯ, ನಿಟ್ಟೂರು.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News