ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ; ಸಿಸಿಟಿವಿ ಜಾಡು ಹಿಡಿದು ತನಿಖೆ

Update: 2023-11-13 15:46 GMT

ಉಡುಪಿ, ನ.13: ನೇಜಾರು ತೃಪ್ತಿ ಲೇಔಟ್‌ನಲ್ಲಿ ರವಿವಾರ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕೊಲೆಗೈದ ಬಳಿಕ ಹಂತಕ ಸಾಗಿರುವ ಮಾರ್ಗದಲ್ಲಿರುವ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್, ಅಲ್ಲಿಂದ ಅಂಬಲಪಾಡಿ, ಕಿನ್ನಿಮುಲ್ಕಿ, ಬಲಾಯಿಪಾದೆ ಹಾಗೂ ಉದ್ಯಾವರ, ಅಲ್ಲಿಂದ ಕಟಪಾಡಿವರೆಗೆ ಸಾಗಿರುವ ಸಿಸಿಟಿವಿ ಫುಟೇಜ್‌ಗಳು ಪತ್ತೆಯಾಗಿವೆ.

ಈತ ಅಲ್ಲಿಯವರೆಗೆ ರಿಕ್ಷಾ ಮತ್ತು ಬೇರೆ ಬೇರೆ ಬೈಕಿನಲ್ಲಿ ಪ್ರಯಾಣಿಸಿರುವುದು ಸಿಟಿಟಿವಿ ದೃಶ್ಯಾವಳಿಯಿಂದ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಕರಾವಳಿ ಬೈಪಾಸ್‌ನಲ್ಲಿ ರಿಕ್ಷಾದಿಂದ ಬಂದು ಇಳಿದ ಹಂತಕ, ಅಲ್ಲೇ ಸಮೀಪದ ಜೆಪಿ ಲೈಟ್‌ನ ಹಿಂಬದಿಗೆ ತೆರಳಿ ಕೂಡಲೇ ವಾಪಾಸ್ಸು ಬಂದಿದ್ದಾನೆ. ಅಲ್ಲಿ ಆತ ಯಾವುದೋ ವಸ್ತುವನ್ನು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪೂರ್ವಯೋಜಿತ ಕೃತ್ಯ?: ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪ ಡಿಸಿದ್ದು, ಹಂತಕ ಸುಪಾರಿ ಕಿಲ್ಲರ್ ಎಂಬ ಅನುಮಾನ ವ್ಯಕ್ತವಾಗಿದೆ. ಆ ದಿಕ್ಕಿನಲ್ಲಿ ಪೊಲೀಸ್ ತಂಡ ತನಿಖೆ ಮುಂದುವರೆಸಿದೆ.

ಸಂತೆಕಟ್ಟೆಯಿಂದ ತೃಪ್ತಿ ಲೇಔಟ್‌ಗೆ ರಿಕ್ಷಾದಲ್ಲಿ ಬಂದ ಹಂತಕ, ದಾರಿ ತಪ್ಪಿ ಮುಂದೆ ಹೋದ ಚಾಲಕನಿಗೆ ನೂರು ಮುಹಮ್ಮದ್ ಅವರ ಮನೆಯನ್ನು ಸರಿಯಾಗಿ ತೋರಿಸಿದ್ದಾನೆ. ಅಂದರೆ ಈತ ಈ ಹಿಂದೆಯೇ ಇಲ್ಲಿಗೆ ಆಗಮಿಸಿ ದ್ದಾನೆ ಮತ್ತು ಎಲ್ಲವನ್ನು ಪರಿಶೀಲನೆ ನಡೆಸಿದ್ದಾನೆ ಎಂಬುದು ತಿಳಿದುಬರುತ್ತದೆ. ಹಾಗಾಗಿ ಇದೊಂದು ಪೂರ್ವಯೋಜಿತ ಕೃತ್ಯ ಆಗಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ.

ಅಣ್ಣನ ಮಗಳಿಂದ ದೂರು: ಕೊಲೆಗೈದು ಪರಾರಿಯಾಗುತ್ತಿದ್ದ ಹಂತಕನನ್ನು ಪ್ರತ್ಯಕ್ಷದರ್ಶಿಯಾಗಿ ಕಂಡ ಮೃತ ಹಸೀನಾರ ಅಣ್ಣನ ಮಗಳು ಐಫಾ (24) ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 449, 302, 307, 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದ ಐಫಾ, ಪಕ್ಕದಲ್ಲಿ ರುವ ಅತ್ತೆಯ ಮನೆಯಲ್ಲಿ ಬೊಬ್ಬೆ ಕೇಳಿ ಓಡಿ ಬಂದಿದ್ದು, ಈ ವೇಳೆ ಹಂತಕ ಅಲ್ಲಿಂದ ಪರಾರಿಯಾದನು. ಈ ಬಗ್ಗೆ ಹಂತಕನನ್ನು ಕಣ್ಣಾರೆ ಕಂಡಿರುವ ಇವರು ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾರೆ.

ನೂರ್ ಮನೆಗೆ ಸೀಲ್: ನಾಲ್ವರ ಕೊಲೆಯಿಂದ ರಕ್ತಸಿಕ್ತವಾಗಿರುವ ಇಡೀ ಮನೆಯನ್ನು ಪೊಲೀಸರು ಸೀಲ್ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಇದರಿಂದ ಸೌದಿಯಿಂದ ಆಗಮಿಸಿರುವ ನೂರು ಮುಹಮ್ಮದ್ ಹಾಗೂ ಬೆಂಗಳೂರಿನಿಂದ ಆಗಮಿಸಿರುವ ಅವರ ಮಗ ಅಸಾದ್ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಮೃತರ ಎಲ್ಲ ಮೊಬೈಲ್‌ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News