26 ವರ್ಷಗಳ ಬಳಿಕ ಕೊಂಕಣ ರೈಲ್ವೆ ಮಾರ್ಗದ ಪ್ರಥಮ ರೈಲು ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬೋಗಿಗಳು ಮೇಲ್ದರ್ಜೆಗೆ

Update: 2024-10-17 15:23 GMT

ಉಡುಪಿ: 26 ವರ್ಷಗಳ ಹಿಂದೆ ಕರಾವಳಿ ಕರ್ನಾಟಕ ಜನತೆಯ ಹಲವು ವರ್ಷಗಳ ಕನಸಾದ ಕೊಂಕಣ ರೈಲಿನ ಓಡಾಟ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ರೈಲ್ವೆ ಸಚಿವ ಮಂಗಳೂರು ಮೂಲದ ಜಾರ್ಜ್ ಫೆರ್ನಾಂಡೀಸ್ ಅವರು ಕೊಂಕಣ ರೈಲ್ವೆ ನಿಗಮವನ್ನು 1998ರ ಮೇ1ರಂದು ರಾಷ್ಟ್ರಕ್ಕೆ ಅರ್ಪಿಸಿದ ದಿನ ಮುಂಬೈ ಎಲ್‌ಟಿಟಿ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿದ ಮೊದಲ ರೈಲು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಬೋಗಿಗಳು ಕೊನೆಗೂ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಮೇಲ್ದರ್ಜೆಗೇರಲಿದೆ.

2025ರ ಫೆಬ್ರವರಿ ತಿಂಗಳ 17 ಮತ್ತು 18ಂದು ಕ್ರಮವಾಗಿ ಮಂಗಳೂರು ಸೆಂಟ್ರಲ್ (ರೈಲು ನಂ.12620) ಹಾಗೂ ಮುಂಬೈಯ ಲೋಕಮಾನ್ಯ ತಿಲಕ್ ನಿಲ್ದಾಣ (12619)ದಿಂದ ಹೊರಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಆಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಫ್‌ಮನ್ ಬುಷ್) ಕೋಚ್‌ಗಳೊಂದಿಗೆ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈಯಲ್ಲಿ ಪ್ರಧಾನಿ ವಾಜಪೇಯಿ ಹಾಗೂ ಜಾರ್ಜ್ ಫೆರ್ನಾಂಡೀಸ್ ಅವರು ಕೆಆರ್‌ಸಿಎಲ್‌ನ್ನು ರಾಷ್ಟ್ರಕ್ಕೆ ಸಮರ್ಪಿಸಿ ಮುಂಬಯಿಯಿಂದ ಮಂಗಳೂರನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಮೊದಲ ರೈಲಿನ ಓಡಾಟಕ್ಕೆ ಹಸಿರು ನಿಶಾನೆ ತೋರಿಸಿದ್ದರು.

ಹಳೆಯದಾದ ಐಆರ್‌ಎಸ್ ಕೋಚ್‌ಗಳೊಂದಿಗೆ ಈ ರೈಲು ಕಳೆದ ವರ್ಷ ಸಂಚಾರದ ಬೆಳ್ಳಿಹಬ್ಬವನ್ನು ಪೂರ್ಣಗೊಳಿಸಿತ್ತು. ಮುಂಬೈಯಲ್ಲಿರುವ ಕರಾವಳಿಗರು ಹಾಗೂ ಕರಾವಳಿಯ ವಿವಿಧ ಪಟ್ಟಣಗಳಿಂದ ವಿವಿಧ ಕಾರಣ ಗಳಿಗಾಗಿಮುಂಬೈಗೆ ತೆರಳುವವರಿಗೆ ಇದು ಪ್ರಮುಖ ಸಂಪರ್ಕ ಸೇತುವೆಯಾಗಿತ್ತು. ಹೀಗಾಗಿ ಯಾವಾಗಲೂ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆಯೂ ಅಧಿಕವಿತ್ತು. ಈ ಹಿನ್ನೆಲೆಯಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳನ್ನು ಆಧುನೀಕರಿಸುವಂತೆ ದಶಕಗಳಿಂದಲೂ ಬೇಡಿಕೆ ಕೇಳಿ ಬಂದಿತ್ತು.

ಜರ್ಮನ್ ವಿನ್ಯಾಸದ ಎಲ್‌ಎಚ್‌ಬಿ ಕೋಚ್‌ಗಳು ಆರಾಮದ, ಸುಖಕರ ದೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದೆ. ಅಧಿಕ ವೇಗ ಹಾಗೂ ಹೆಚ್ಚು ಸುರಕ್ಷಿತವೆನಿಸಿದ ಈ ಕೋಚ್‌ಗಳಲ್ಲಿ ಶಬ್ದ ಮಾಲಿನ್ಯವೂ ಕಡಿಮೆ ಇರುತ್ತದೆ. ಕರಾವಳಿ ಕನ್ನಡಿಗರಿಗೆ ಹೆಚ್ಚು ಆಪ್ತವೆನಿಸಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು ಬದಲಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಆ.19ರಂದು ಪತ್ರ ಬರೆದು ಒತ್ತಾಯಿಸಿದ್ದರು.

ಕೊಂಕಣ ರೈಲು ಮಾರ್ಗದಲ್ಲಿ ಓಡಿದ ಮೊದಲ ರೈಲಾದ ಕಾರಣ ಕರ್ನಾಟಕದ ಕರಾವಳಿ ಭಾಗದ ಜನರಿಗೆ ಈ ರೈಲಿ ನೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿ ಸಂಸದರು ರೈಲ್ವೆ ಸಚಿವರಿಗೆ ಪತ್ರ ಬರೆಯುವ ಮೊದಲು ಹಾಗೂ ನಂತರ ಮತ್ಸ್ಯಗಂಧ ರೈಲಿನ ಬೋಗಿಗಳಲ್ಲಿ ಸಂಭವಿಸಿದ ಒಂದೆರಡು ಅವಘಡಗಳು ಬೋಗಿಗಳನ್ನು ಬದಲಿಸ ಬೇಕಾದ ಅನಿವಾರ್ಯತೆಯನ್ನು ರೈಲ್ವೆ ಅಧಿಕಾರಿಗಳಿಗೆ ತಂದೊಡ್ಡಿದವು.

ಇದರಿಂದ 2025ರ ಫೆಬ್ರವರಿ 17ರಂದು ಮಂಗಳೂರಿನಿಂದ ಹಾಗೂ ಫೆ.18ರಂದು ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಈ ರೈಲು ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ. ಇದುವರೆಗೆ 23 ಐಆರ್‌ಎಸ್ ಕೋಚ್‌ ಗಳೊಂದಿಗೆ ಸಂಚರಿಸುತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ನಂತರ 22 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ.

ಈ ರೈಲಿನಲ್ಲಿ ಎರಡು 2ಟಯರ್ ಎಸಿ, ನಾಲ್ಕು 3ಟಯರ್ ಎಸಿ, 2 3ಟಯರ್ ಎಕಾನಮಿ ಎಸಿ, 8 ಸ್ಲೀಪರ್ ಕೋಚ್, 4 ಜನರಲ್ ಕೋಚ್, ಒಂದು ಜನರೇಟರ್ ಕಾರ್ ಹಾಗೂ ಒಂದು ಎಸ್‌ಎಲ್‌ಆರ್ ಇರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News