ಭಾರತ ಸಂಸ್ಕೃತಿ ಇತಿಹಾಸ ಆಫ್ರಿಕಾದೊಂದಿಗೆ ತಳುಕು: ಲಕ್ಷ್ಮೀಪತಿ ಕೋಲಾರ

Update: 2024-10-17 16:46 GMT

ಉಡುಪಿ, ಅ.17: ಭಾರತದ ಸಂಸ್ಕೃತಿ ಇತಿಹಾಸದ ಹೆಜ್ಜೆಗುರುತುಗಳು ಆಫ್ರಿಕಾದೊಂದಿಗೆ ತಳುಕು ಹಾಕಿಕೊಂಡಿವೆ ಎಂದು ಸಂಸ್ಕೃತಿ ಚಿಂತಕ, ನಾಟಕಕಾರ, ಕಳೆದ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಲಕ್ಷ್ಮೀಪತಿ ಕೋಲಾರ ಹೇಳಿದ್ದಾರೆ.

ತೆಂಕನಿಡಿಯೂರು ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ‌್ಯಕ್ರಮದಲ್ಲಿ ಅವರು ಮಾನವ ಇತಿಹಾಸದ ವಿಕಾಸದ ಕುರಿತು ವಿವರಗಳನ್ನು ನೀಡಿ ಮಾತನಾಡುತಿದ್ದರು.

ಇತ್ತೀಚೆಗಿನ ಅಧ್ಯಯನಗಳು ಸಂಸ್ಕೃತಿ ಇತಿಹಾಸದ ಮೇಲೆ ಬೀರಿದ ತಿಳುವಳಿಕೆಯ ಹೊಸಬೆಳಕು ‘ಭಾರತೀಯ ಸಂಸ್ಕೃತಿ ಇತಿಹಾಸದ ಮಹಾಮರೆವನ್ನು’ ಹೇಗೆ ಅನಾವರಣ ಮಾಡಿವೆ ಎಂಬುದನ್ನು ವಿವರಿಸಿದ ಅವರುಮೂಲಪಿತೃನ ಮಾದರಿ ಯಾದ ಮುರುಂಗೋ/ಮುರುಗನ ಆರಾಧನೆ ಹಾಗೂ ಮಾತೃಮೂಲೀಯ ಅಳಿಯಕಟ್ಟಿನಂತಹ ಸ್ತ್ರೀಪ್ರಧಾನ ಸಾಮಾಜಿಕ ಅನುಸರಣೆಗಳಲ್ಲಿ ಆಫ್ರಿಕಾದ ಜೊತೆಗಿನ ಭಾರತದ ನಂಟನ್ನು ವಿವರಿಸಿದರು.

ಈ ನಂಟು ಮತ್ತದರ ಅರಿವು ಕಟ್ಟುಕತೆಯಲ್ಲ. ಬದಲಿಗೆ ಮನುಷ್ಯನ ಒಳಗೇ ದಾಖಲಾಗಿ ಹರಿದುಬಂದ ನೆನಪಿನಕೋಶದ ಸತ್ಯ. ಡಿಎನ್‌ಎ ಹೇಳಿದ ಕಥೆ ಎಂದು ವಿವರಿಸಿದ ಲಕ್ಷ್ಮೀಪತಿ ಕೋಲಾರ, ಅಷ್ಟೇ ಅಲ್ಲದೇ, ಸಂಶೋಧನೆಗಳ ಫಲವಾಗಿ ಜ್ಞಾನದ ಜಗತ್ತು ಇಂದು ಪರಿಚಯಿಸಿರುವ ಡಿಎನ್‌ಎ ನಮ್ಮದೇ ಕಥೆಯನ್ನು ನಮ್ಮೊಂದಿಗೆ ಹೊತ್ತುಬಂದ ಹೊರೆಕಾರನಷ್ಟೇ ಅಲ್ಲ, ಅದನ್ನು ಅಷ್ಟೇ ಗಟ್ಟಿಯಾಗಿ ನಮಗೇ ಹೇಳಬಲ್ಲ ನಮ್ಮೊಳಗಿನ ನಮ್ಮದೇ ಕಥೆಗಾರನೂ ಹೌದು ಎಂಬುದನ್ನು ಮರೆಯಬಾರದು ಎಂದರು.

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ವಹಿಸಿದ್ದರು. ಶಾಸ್ತ್ರೀಯ ಕನ್ನಡ ಅತ್ಯು ನ್ನತ ಅಧ್ಯಯನ ಸಂಸ್ಥೆ ಮೈಸೂರು ಇದರ ನಿಕಟಪೂರ್ವ ಯೋಜನಾ ನಿರ್ದೇಶಕರಾಗಿದ್ದ ಪ್ರೊ. ಶಿವರಾಮ ಶೆಟ್ಟಿ, ತೆಂಕನಿಡಿಯೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹಾಗೂ ಕನ್ನಡ ಸಹಪ್ರಾಧ್ಯಾಪಕ ರಾಧಾಕೃಷ್ಣ ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ಶರಿತಾ ವಂದಿಸಿದ ಕಾರ‌್ಯಕ್ರಮವನ್ನು ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News