ರಾಜಸ್ಥಾನದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಪತಿಗೆ ಹಸ್ತಾಂತರ
Update: 2023-10-04 08:58 GMT
ಉಡುಪಿ, ಅ.4: ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಉಡುಪಿ ಬಾಳಿಗಾ ಆಸ್ಪತ್ರೆ ಚಿಕಿತ್ಸೆ ಕೊಡಿಸಿ ಇದೀಗ ಚೇತರಿಸಿಕೊಂಡ ರಾಜಸ್ಥಾನ ಮೂಲದ ಮಾನಸಿಕ ಅಸ್ವಸ್ಥೆ ಸೀತಾ(40) ಎಂಬವರನ್ನು ಆಕೆಯ ಪತಿಯ ವಶಕ್ಕೆ ಒಪ್ಪಿಸಲಾಗಿದೆ.
ಈಕೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಾರಾಡಿಯ ಶಾಲೆಯ ಬಳಿ ಅಲೆದಾಡಿ ರಾತ್ರಿ ವೇಳೆ ಗದ್ದೆಯ ನೀರಿಗೆ ಬಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಈಕೆಯನ್ನು ರಕ್ಷಿಸಿ ಮೊದಲು ಉಡುಪಿಯ ಸಖಿ ಸೆಂಟರ್ಗೆ ದಾಖಲಿಸಿ ಬಳಿಕ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಇದೀಗ ಚಿಕಿತ್ಸೆಗೆ ಸ್ಪಂದಿಸಿದ ಈಕೆಯ ಪತಿಯನ್ನು ಸಂಪರ್ಕಿಸುವಲ್ಲಿ ವಿಶು ಶೆಟ್ಟಿ ಪೊಲೀಸರ ಸಹಾಯದಿಂದ ನಡೆಸಿದ ಪ್ರಯತ್ನ ಸಫಲವಾಯಿತು. ಈಕೆಯ ಪತಿ ಅಂಗವಿಕಲನಾಗಿದ್ದು, ಆಸ್ಪತ್ರೆಯ ವೆಚ್ಚ ಭರಿಸಲು ಅಸಮರ್ಥರಾದ ಕಾರಣ, ವಿಶು ಶೆಟ್ಟಿ ಅವರೇ ಭರಿಸಿ ಮಾನವೀಯತೆ ಮೆರೆದಿದ್ದಾರೆ. ಮಹಿಳಾ ಪೊಲೀಸ್ ಶಾಂಭವಿ ಕಾನೂನು ಪ್ರಕ್ರಿಯೆ ನಡೆಸಿದರು.