ಮಲ್ಪೆ| ಮಹಿಳೆಯ ನಗದು, ಮೊಬೈಲ್ ಕಳವು ಪ್ರಕರಣ: ಆರೋಪಿ ಬಂಧನ

ಮಲ್ಪೆ: ಮೂರು ದಿನಗಳ ಹಿಂದೆ ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೊಬೈಲ್, ಪರ್ಸ್‌ಗಳಿದ್ದ ಚೀಲವನ್ನು ಕಳವು ಮಾಡಿ ಬೈಕಿನಲ್ಲಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ಮಲ್ಪೆ ತೊಟ್ಟಂ ನಿವಾಸಿ ದರ್ಶನ್ ಕುಮಾರ್ ಬಂಧಿತ ಆರೋಪಿ. ಈತನಿಂದ ಕಳವುಗೈದ ಸುಮಾರು 13,000 ರೂ. ಮೌಲ್ಯದ ಮೊಬೈಲ್, 2,500ರೂ. ನಗದು ಹಾಗೂ ಲೇಡೀಸ್ ಪರ್ಸನ್ನು ವಶಪಡಿಸಿಕೊಳ್ಳಲಾಗಿದೆ.
ಬಾಗಲಕೋಟೆ ಮೂಲದ ಸರಸ್ವತಿ(21) ಎಂಬವರು ಮಾ.21ರಂದು ಬೆಳಗ್ಗೆ ತನ್ನ ಮಗನೊಂದಿಗೆ ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಆರೋಪಿ ಸರಸ್ವತಿ ಅವರ ಕೈಯಲ್ಲಿದ್ದ ಚೀಲವನ್ನು ಕಸಿದು ಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕ ರವಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.