ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಅ.24ಕ್ಕೆ ವಿಚಾರಣೆ ಮುಂದೂಡಿಕೆ
ಉಡುಪಿ, ಆ.27: ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿ ಆದೇಶ ನೀಡಿದೆ.
ಕಳೆದ ಬಾರಿ ಮುಂದಿನ ವಿಚಾರಣೆಯನ್ನು ಆ.24ಕ್ಕೆ ನಿಗದಿ ಪಡಿಸಿದ್ದ ಹಿನ್ನೆಲೆಯಲ್ಲಿ ಅಂದು ಆರೋಪಿ ಪ್ರವೀಣ್ ಚೌಗುಲೆ ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿ ಪರ ವಕೀಲ ಗುರುರಾಜ್ ಜಿ.ಎಸ್. ಹಾಜರಿದ್ದರು.
ಈ ಸಂದರ್ಭ ಆರೋಪಿಯು ‘ನನ್ನನ್ನು ಕ್ವಾರಂಟೈನ್ ಜೈಲಿನಲ್ಲಿ ಇರಿಸಲಾಗಿದೆ ಮತ್ತು ನಾನು ಆಹಾರ ಮತ್ತು ನೀರನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ನ್ಯಾಯಾಧೀಶರ ಮುಂದೆ ಹೇಳಿದನು. ಆದುದರಿಂದ ನನ್ನನ್ನು ಮುಖ್ಯ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆತ ನ್ಯಾಯಾಧೀಶರಲ್ಲಿ ಮನವಿ ಮಾಡಿದನು.
ಆರೋಪಿ ಅಹವಾಲು ಸಲ್ಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಜೈಲು ಅಧೀಕ್ಷಕರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರಾಗುವಂತೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಸೂಚಿಸಿದರು. ಅದರಂತೆ ಹಾಜರಾದ ಜೈಲು ಅಧೀಕ್ಷರರು, ಮುಖ್ಯ ಜೈಲಿನಲ್ಲಿ ಆರೋಪಿಗೆ ಬೆದರಿಕೆ ಇರುವುದರಿಂದ ಸುರಕ್ಷತೆ ದೃಷ್ಠಿ ಯಿಂದ ಅಲ್ಲಿ ಇರಿಸಲಾಗಿದೆ ಎಂದರು. ಆರೋಪಿ ಉದ್ದೇಶಪೂರ್ವಕವಾಗಿ ಆಹಾರ ಮತ್ತು ನೀರನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಜೈಲು ಅಧೀಕ್ಷಕರು ಕೋರ್ಟ್ ಮುಂದೆ ತಿಳಿಸಿದರು.
ಬಳಿಕ ನ್ಯಾಯಾಧೀಶರು ಆರೋಪಿಗೆ ಆಹಾರ ಮತ್ತು ನೀರನ್ನು ತೆಗೆದು ಕೊಳ್ಳುವಂತೆ ನಿರ್ದೇಶನ ನೀಡಿದರು. ಆರೋಪಿಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು ಮತ್ತು ಅಗತ್ಯವಿದ್ದರೆ ಆತನಿಗೆ ವೈದ್ಯಕೀಯ ನೆರವು ನೀಡಬೇಕು ಎಂದು ನ್ಯಾಯಾ ಧೀಶರು ಜೈಲು ಅಧೀಕ್ಷಕರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಇದ್ದರು.